ವಿಜಯಪುರ: ಪತಿ ಹಾಗೂ ಪತ್ನಿ ನಡುವಿನ ಜಗಳ ಬಿಡಿಸಲು ಹೋದ ಯುವಕನೇ ಹತ್ಯೆಯಾದ ಘಟನೆ ವಿಜಯಪುರದ ಗುರುಪಾದೇಶ್ವರ ನಗರದಲ್ಲಿ ನಡೆದಿದೆ.
30 ವರ್ಷದ ಪರಶುರಾಮ ಕೊಲೆಯಾದ ಯುವಕ. ವಿಜಯಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕ ಗುರುಪಾದೇಶ್ವರ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ. ಬಾಡಿಗೆ ಮನೆ ಮಾಲೀಕ ಹಾಗೂ ಆತನ ಪತ್ನಿ ನಡುವೆ ಜಗಳವಾಗಿದೆ. ಜಗಳ ಬಿಡಿಸಲೆಂದು ಹೋದ ಪರಶುರಾಮನಿಗೆ ಮಹಿಳೆಯ ಸಂಬಂಧಿಕರು ಚಾಕು ಇರಿದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಗಲಕೋಟೆ ಮೂಲದ ಅಚನೂರು ಗ್ರಾಮದ ನಿವಾಸಿಯಾಗಿದ್ದ ಯುವಕ ಜಗಳ ಬಿಡಿಸಲು ಹೋಗಿ ತಾನೇ ಬಲಿಯಾಗಿದ್ದಾನೆ. ಸ್ಥಳಕ್ಕೆ ಜಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.