ಭಾರತದಂತಹ ಸಂಪ್ರದಾಯವಾದಿ ದೇಶದಲ್ಲಿ ಲೈಂಗಿಕತೆ ಮತ್ತು ಅದರ ಬಗೆಗಿನ ಚರ್ಚೆಯ ಬಗ್ಗೆ ಮಡಿವಂತಿಕೆ ಇದೆ. ಅಷ್ಟಾಗಿ ಮುಕ್ತತೆ ಇಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಂಡೋಮ್ ಜಾಹೀರಾತನ್ನು ಗುರುತಿಸಿದ ನಂತರ ಕೆಲವು ಪ್ರಯಾಣಿಕರು ಅನಾನುಕೂಲತೆ ಅನುಭವಿಸಿದ್ದಾರೆ.
ಅದರಲ್ಲೂ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಮಾತ್ರ ಮೀಸಲಿಟ್ಟ ಆಸನದ ಮೇಲಿನ ಫಲಕದಲ್ಲಿ ಕಾಂಡೋಮ್ ತಯಾರಿಕಾ ಕಂಪನಿಯ ಜಾಹೀರಾತು ಪ್ರಕಟಿಸಲಾಗಿದೆ. ಇದರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಮೆಟ್ರೋ ವಿರುದ್ಧ ಕೋಪಗೊಂಡಿದ್ದಾರೆ.
ಕೆಲವರು ಅದನ್ನು ಮೆಟ್ರೋಗೆ ಟ್ಯಾಗ್ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಓಹ್ ದೆಹಲಿ ಮೆಟ್ರೋ. ನೀವು ತುಂಬಾ ಪ್ರಗತಿಪರರಾಗಿದ್ದೀರಾ ? ಮಹಿಳೆಯರ ಸೀಟಿನ ಮೇಲೆ ಕಾಂಡೋಮ್ ಜಾಹೀರಾತು ? ಇದು ನಿಮ್ಮ ತಪ್ಪಲ್ಲ. ಆದರೆ ಇದು ಹಗಲಿನಲ್ಲಿ ಟಿವಿಯಲ್ಲಿ ಕಾಂಡೋಮ್ ಜಾಹೀರಾತುಗಳನ್ನು ತೋರಿಸದಿರುವ ನಿಯಮಗಳಿರುವ ದೇಶ ಎಂದು ನೀವು ತಿಳಿದಿರಬೇಕು…… ಎಂದು ಒಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಹೀರಾತಿನ ಬಗ್ಗೆ ಸಮಸ್ಯೆ ಇಲ್ಲ ಎಂದು ಹೇಳುವ ಜಾಲತಾಣಿಗರೂ ಇದ್ದರು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಕೂಡ ಹಾಕಿದ್ದಾರೆ.
ಹಲವು ಬಳಕೆದಾರರು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಅನ್ನು ಟ್ಯಾಗ್ ಮಾಡಿದ ನಂತರ, ಈ ಜಾಹೀರಾತು ಹಳೆಯದು ಮತ್ತು ಈಗಾಗಲೇ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.