ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಘಟಕದ ಸರಣಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಟ್ವೀಟ್ ಬಗ್ಗೆ ನಾನು ಹೆಚ್ಚು ಗಮನಹರಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಈ ರೀತಿ ಟ್ವೀಟ್ ಮಾಡುವುದು ಇದೇ ಮೊದಲೇನಲ್ಲ, ಅವರ ಟ್ವೀಟ್ ನ್ನು ನಾನು ಗಮನಿಸುವುದೂ ಇಲ್ಲ. ಕಾಂಗ್ರೆಸ್ ನವರು ಹೇಳುವುದನ್ನು ಜನರು ನಂಬುವುದೂ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರ ಈ ಕೆಲಸಗಳಿಂದ ನಾನು ಮತ್ತಷ್ಟು ಗಟ್ಟಿಯಾಗುತ್ತೇನೆ. ಪಕ್ಷ ಸಂಘಟನೆ, ಜನರ ಬಳಿ ಹೋಗುವ ಕೆಲಸ ಮಾಡುತ್ತೇನೆ. ರಾಜ್ಯದ ಜನತೆ ನನ್ನ ಕೆಲಸದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್ ನವರ ಹೇಳಿಕೆ ಬಗ್ಗೆ ಗಮನಹರಿಸುವುದಿಲ್ಲ ಎಂದರು.