ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬದಲಾವಣೆ ವದಂತಿ ಹರಿದಾಡುತ್ತಿದ್ದು, ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ಕಾಂಗ್ರೆಸ್ ಮಾಡಿದ್ದ ಟ್ವೀಟ್ ಗೆ ಕೆಂಡಾಮಂಡಲಗೊಂಡಿದ್ದ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರ ಮಧ್ಯೆ ತಿರುಗೇಟು ನೀಡಿದ್ದ ಕಾಂಗ್ರೆಸ್, ಸಿಎಂ ಬದಲಾವಣೆ ಬೆಂಕಿ ಹಚ್ಚಿದ್ದೇ ನೀವು ಎಂದು ಹೇಳಿತ್ತು. ಇದಕ್ಕೆ ಪೂರಕವಾಗಿ ಸುರೇಶ್ ಗೌಡ ಅವರ ಹೇಳಿಕೆಯನ್ನು ಕಾಂಗ್ರೆಸ್ ಪ್ರಸ್ತಾಪಿಸಿತ್ತು.
ಮುಖ್ಯಮಂತ್ರಿ ಬದಲಾವಣೆ ವದಂತಿ ವಿಚಾರ ಈಗ ಬಿಜೆಪಿ ಹೈಕಮಾಂಡ್ ನಾಯಕರ ಗಮನಕ್ಕೂ ಬಂದಿದ್ದು, ಹೀಗಾಗಿ ರಾಜ್ಯದ ಪ್ರಮುಖ ನಾಯಕರಿಗೆ ಮಹತ್ವದ ಸೂಚನೆಯೊಂದು ರವಾನೆಯಾಗಿದೆ ಎಂದು ಹೇಳಲಾಗಿದೆ. ಪಕ್ಷದ ಕೆಲವರು ಇದನ್ನು ಹರಿಬಿಟ್ಟಿರಬಹುದು ಎಂಬ ಶಂಕೆ ಬಿಜೆಪಿ ಕೇಂದ್ರ ನಾಯಕರಿಗಿದ್ದು, ಹೀಗಾಗಿ ಈ ವದಂತಿ ಮೂಲವನ್ನು ಪತ್ತೆ ಹಚ್ಚುವಂತೆ ಸಲಹೆ ನೀಡಲಾಗಿದೆ ಎನ್ನಲಾಗಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಯಾವುದೇ ಕಾರಣಕ್ಕೂ ನಿಮ್ಮನ್ನು ಬದಲಾಯಿಸುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಿ ಎಂದು ಅಭಯ ನೀಡಿದ್ದಾರೆನ್ನಲಾಗಿದೆ.
ಇದರ ಮಧ್ಯೆ ಮುಖ್ಯಮಂತ್ರಿ ಬದಲಾವಣೆ ವದಂತಿ ಕುರಿತು ಸ್ಪಷ್ಟನೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಈ ವಿಚಾರವನ್ನು ಇಲ್ಲಿಗೆ ಕೈ ಬಿಡಿ ಎಂದು ಹೇಳಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಮತ್ತೊಬ್ಬರ ನೇಮಕವಾಗಲಿದೆ ಎಂದು ತಿಳಿಸಿದ್ದರು. ಆದರೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಇನ್ನಷ್ಟು ದಿನಗಳ ಕಾಲ ಈ ವಿಚಾರ ಚರ್ಚೆಯಲ್ಲಿರುವ ಸಾಧ್ಯತೆ ಇದೆ.