ಬೆಂಗಳೂರು: ತೆರಿಗೆ ಪರಿಷ್ಕರಣೆಗೆ ಗ್ರಾಮ ಆಸ್ತಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಕೃಷಿಯೇತರ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶವಿದೆ. ರಾಜ್ಯದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಯೇತರ ಕಟ್ಟಡಗಳು, ಭೂಮಿ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ತೆರಿಗೆ ನಿಗದಿಪಡಿಸಲು ಸರ್ಕಾರ ಆದೇಶ ಹೊರಡಿಸಿದೆ.
ಇದಕ್ಕಾಗಿ ಸರ್ಕಾರದಿಂದ ಮೂರು ತಿಂಗಳ ಗಡುವು ನೀಡಲಾಗಿದೆ. ತುಮಕೂರು ಜಿಲ್ಲೆಯಲ್ಲಿನ 330 ಗ್ರಾಂ ಗಳಲ್ಲಿ ಪ್ರಾಯೋಗಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದ ಎಲ್ಲಾ ಆಸ್ತಿಗಳಿಗೂ ತೆರಿಗೆ ನಿಗದಿ ಮಾಡಲಾಗಿದ್ದು, ರಾಜ್ಯದ ಉಳಿದ ಗ್ರಾಮ ಪಂಚಾಯಿತಿಗಳಲ್ಲಿಯೂ ಜಾರಿಗೊಳಿಸಲಾಗುವುದು ಎನ್ನಲಾಗಿದೆ.
ಗ್ರಾಮದ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುವುದು. ಕೈಗಾರಿಕೆ ಪ್ರದೇಶಗಳಲ್ಲಿ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ಕೈಗೊಳ್ಳಲಿದ್ದು, ಆಸ್ತಿಗಳು, ಮಾಲೀಕರ ವಿವರ ಸಂಗ್ರಹಿಸಲಾಗುವುದು. ಗ್ರಾಮ ಪರಿವರ್ತಿತ ಜಮೀನು, ಅನುಮೋದಿತ ಬಡಾವಣೆಗಳು, ಸರ್ಕಾರದ ವಸತಿ ಯೋಜನೆ, ಸಾರ್ವಜನಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗುವುದು. ಎಲ್ಲಾ ದಾಖಲೆಗಳ ಪ್ರತಿ ಸಂಗ್ರಹಿಸಿ ಮಾಲೀಕರ ಸಮ್ಮುಖದಲ್ಲಿ ದಾಖಲೆಗಳ ವಿವರ ಮತ್ತು ಅವರ ಆಸ್ತಿ ತೆರಿಗೆಯನ್ನು ದೃಢೀಕರಿಸಲಾಗುವುದು ಎನ್ನಲಾಗಿದೆ.