ಬಿಹಾರ ಬಿಕ್ಕಟ್ಟಿನ ಕುರಿತು ವರದಿ ಮಾಡುತ್ತಿದ್ದ ಹಿರಿಯ ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಅವರಿಗೆ ಜನರ ಗುಂಪೊಂದು ಕಿರಿಕಿರಿ ಮಾಡಿರೋ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವರದಿ ಮಾಡುತ್ತಿರುವ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿ ನಿಂತು ನೂರಾರು ಮಂದಿ ಬೊಬ್ಬೆ ಹೊಡೆದಿದ್ದಾರೆ. ಇವರೆಲ್ಲ ಆರ್.ಜೆ.ಡಿ. ಹಾಗೂ ಜೆಡಿಯು ಬೆಂಬಲಿಗರು ಎನ್ನಲಾಗಿದೆ.
“ಗೋದಿ ಮೀಡಿಯಾ”, “ಅಂಜನಾ ಮೋದಿ ಮುರ್ದಾಬಾದ್” ಎಂಬ ಘೋಷಣೆ ಕೂಗುತ್ತ ಅಂಜನಾ ಕಶ್ಯಪ್ಗೆ ತೊಂದರೆ ಕೊಟ್ಟಿದ್ದಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇಷ್ಟೆಲ್ಲಾ ಕಿರಿಕಿರಿ ಮಾಡಿದ್ರೂ ಪತ್ರಕರ್ತೆ ಮಾತ್ರ ಜನರ ಗೌಜು, ಗದ್ದಲ ಕಡಿಮೆಯಾಗಲಿ ಅಂತಾ ತಾಳ್ಮೆಯಿಂದ ಕಾಯುತ್ತಿದ್ದರು.
ಈ ವಿಡಿಯೊ ಬಗ್ಗೆ ಟ್ವಿಟ್ಟರ್ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಪತ್ರಕರ್ತೆಗೆ ತೊಂದರೆ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ರಿಯಾಕ್ಟ್ ಮಾಡಿದ್ದಾರೆ. ಹುಸಿ ಸ್ತ್ರೀವಾದಿಗಳು ಇದನ್ನು ವಿಷಕಾರಿ ಪುರುಷತ್ವ ಎಂದು ಕರೆಯಲು ಹೋಗುತ್ತಿಲ್ಲ, ಏಕೆಂದರೆ ಇದು ನಿತೀಶ್ ಯಾದವ್ ಬಿಹಾರದಲ್ಲಿ ನಡೆಯುತ್ತಿದೆ, ಮತ್ತು ಯುಪಿಯಲ್ಲಿ ಅಲ್ಲ ಅಂತಾ ಕಮೆಂಟ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಜಾದ್ ಪೂನಾವಾಲಾ, ವರದಿಗಾರ್ತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನೀವು ಚಾನೆಲ್ ಅನ್ನು ಇಷ್ಟಪಡಬಹುದು ಅಥವಾ ಇಷ್ಟಪಡದಿರಬಹುದು ಆದರೆ ವರದಿಗಾರ್ತಿಯನ್ನು ಹೆದರಿಸುವ- ಬೆದರಿಸುವ, ನಿಂದನೆ- ಕೀಟಲೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಜನರು ಅಷ್ಟೆಲ್ಲಾ ಕೂಗಾಡಿ ಗದ್ದಲ ಎಬ್ಬಿಸಿದರೂ ಶಾಂತವಾಗಿಯೇ ಕರ್ತವ್ಯ ನಿರ್ವಹಿಸಿದ ಅಂಜನಾ ಓಂ ಕಶ್ಯಪ್ ಬಗ್ಗೆ ಮೆಚ್ಚುಗೆ ಹರಿದು ಬಂದಿದೆ.