ಸ್ಕೂಟರ್ ಅಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗೋದು ಹೋಂಡಾ ಆಕ್ಟಿವಾ. ಸದ್ಯ ಹೋಂಡಾ ಕಂಪನಿಯ ಸ್ಕೂಟರ್ಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿವೆ. ಸದ್ಯ ಹೋಂಡಾ ಆಕ್ಟಿವಾ ಶ್ರೇಣಿಯು Activa 6G ಮತ್ತು Activa 125 ಗ್ರಾಹಕರನ್ನು ಸೆಳೆಯುತ್ತಿದೆ.
ಈ ಮಧ್ಯೆ ಹೊಸ ಮಾಡೆಲ್ ಒಂದನ್ನು ರಸ್ತೆಗಿಳಿಸಲು ಹೋಂಡಾ ಕಂಪನಿ ತಯಾರಿ ಮಾಡಿಕೊಂಡಿದೆ. ಈ ಸ್ಕೂಟರ್ನ ಹೆಸರು ಹೋಂಡಾ ಆಕ್ಟಿವಾ 7G. ಕಂಪನಿ ಇತ್ತೀಚೆಗಷ್ಟೆ ಸ್ಕೂಟರ್ನ ಟೀಸರ್ ಅನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಿದೆ.
ಸ್ಕೂಟರ್ನ ಮುಖಭಾಗವನ್ನು ಟೀಸರ್ನಲ್ಲಿ ರಿವೀಲ್ ಮಾಡಲಾಗಿದೆ. ಇದು ಸ್ಟ್ಯಾಂಡರ್ಡ್ ಆಕ್ಟಿವಾವನ್ನು ಹೋಲುತ್ತದೆ. ಆಕ್ಟಿವಾ 7G ಅನ್ನು ಹಬ್ಬದ ಸೀಸನ್ನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಟೀಸರ್ನಲ್ಲಿ ಸ್ಕೂಟರ್ನ ವಿಶೇಷತೆಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೋಂಡಾ ‘ಆಕ್ಟಿವಾ 7 ಜಿ’ ಎಂಬ ಹೆಸರನ್ನು ಸಹ ಬರೆದಿಲ್ಲ.
ಈ ಹೊಸ ಸ್ಕೂಟರ್ ಬಹುತೇಕ 6G ಯನ್ನೇ ಹೋಲುತ್ತದೆ ಅನ್ನೋದು ತಜ್ಞರ ಲೆಕ್ಕಾಚಾರ. ಕಂಪನಿಯು ಆಕ್ಟಿವಾ 6G ಯಲ್ಲಿಯೇ BS6 ಅನ್ನು ನೀಡಿದೆ. ಆದಾಗ್ಯೂ, ಆಕ್ಟಿವಾ 7G ಹಳೆಯ ಪವರ್ಟ್ರೇನ್ ಅನ್ನು ಪಡೆಯುವ ಸಾಧ್ಯತೆಯಿದೆ. ಇದು 110cc ಎಂಜಿನ್ ಹೊಂದಿರಲಿದ್ದು, 7.68 bhp ಮತ್ತು 8.79 Nm ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹೋಂಡಾ ಆಕ್ಟಿವಾ 7G, 6G ತರಹದ ಇಂಧನ ದಕ್ಷತೆ, ಬೂಟ್ ಸ್ಪೇಸ್, 692 mm ಸೀಟ್ ಎತ್ತರ, ಸೈಲೆಂಟ್ ಸ್ಟಾರ್ಟರ್ ಮೋಟಾರ್ ಮತ್ತು ಇನ್ನೂ ಹೆಚ್ಚಿನ ವಿಶೇಷತೆಗಳನ್ನು ಹೊಂದಿರಲಿದೆ. ಹೋಂಡಾ ಆಕ್ಟಿವಾ 7G ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು LED ಹೆಡ್ಲೈಟ್ಗಳನ್ನು ಅಳವಡಿಸುವ ಸಾಧ್ಯತೆ ಇದೆ. ಇವೆಲ್ಲವೂ ಆಕ್ಟಿವಾ 6G ಡೀಲಕ್ಸ್ ರೂಪಾಂತರದಲ್ಲಿ ಲಭ್ಯವಿವೆ.