ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬದಲಾವಣೆ ಕುರಿತಂತೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಮೊದಲ ಸಿಎಂ – ₹2,500 ಕೋಟಿ, ಎರಡನೇ ಸಿಎಂ – ₹2,500 ಕೋಟಿ, ಮೂರನೇ ಸಿಎಂ – ₹2,500 ಕೋಟಿ. ಒಟ್ಟು ಸಂಪಾದನೆ – ₹7,500 ಕೋಟಿ ! ಬಿಜೆಪಿ ಪಕ್ಷದ ಹೈಕಮಾಂಡ್ ಸಂಪಾದನೆಗೆ ಅದ್ಬುತ ದಾರಿ ಕಂಡುಕೊಂಡಿದೆ ! ಬೊಮ್ಮಾಯಿಯವರೇ, ನಿಮ್ಮ ಕಂತು ತೀರಿತೇ ? ಅಥವಾ 40% ಕಮಿಷನ್ನಲ್ಲಿ ಹೈಕಮಾಂಡ್ ಪಾಲು ತಲುಪಿಸಲು ವಿಫಲರಾದ್ರಾ? ಎಂದು ಪ್ರಶ್ನೆ ಮಾಡಿತ್ತು.
ಈ ಟ್ವೀಟ್ ಈಗ ಆಡಳಿತರೂಢ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಕಾಂಗ್ರೆಸ್ ಪಕ್ಷ ಮತ್ತದರ ನಾಯಕರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಬೊಮ್ಮಾಯಿಯವರ ಆಡಳಿತ ನೋಡಿ ಕಾಂಗ್ರೆಸ್ ನವರಿಗೆ ಹೊಟ್ಟೆಯುರಿ ಶುರುವಾಗಿದೆ. ಅವರ ಅಭಿವೃದ್ದಿ ಪರ ಆಡಳಿತದ ಕಾರಣಕ್ಕೆ ನಾವು ಮುಂದೆ ಅಧಿಕಾರಕ್ಕೆ ಬರುವುದಿಲ್ಲವೆಂಬ ಹತಾಶೆಯಲ್ಲಿ ಈ ಟ್ವೀಟ್ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ, ಬಿಜೆಪಿ ಮುಖ್ಯಮಂತ್ರಿ ಬದಲಾಯಿಸಲು ಕಾಂಗ್ರೆಸ್ ಗೆ ಅಧಿಕಾರವಿದೆಯಾ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ವಿಚಾರ ಹೈಕಮಾಂಡ್ ಮುಂದೆ ಇಲ್ಲ. ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದು ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.