ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಹೊಸ ‘ಲಂಗ್ಯಾ’ ವೈರಸ್ ಆತಂಕ ಮೂಡಿಸಿದೆ. ಪ್ರಾಣಿ ಮೂಲದ ಹೊಸ ರೀತಿಯ ಹೆನಿಪಾವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಜನರಿಗೆ ಸೋಂಕು ತಗುಲಿಸಿದೆ ಎಂದು ಅಧಿಕೃತ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಹೊಸ ಪ್ರಕಾರದ ಹೆನಿಪವೈರಸ್(ಲಂಗ್ಯಾ ಹೆನಿಪವೈರಸ್, ಲೇವಿ ಎಂದೂ ಸಹ ಹೆಸರಿಸಲಾಗಿದೆ) ಪೂರ್ವ ಚೀನಾದಲ್ಲಿ ಜ್ವರ ರೋಗಿಗಳ ಗಂಟಲಿನ ಸ್ವ್ಯಾಬ್ ಮಾದರಿಗಳಲ್ಲಿ ಕಂಡುಬಂದಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದೆ.
ಪ್ರಾಣಿಗಳಿಂದ ಬಂದಿರುವ ಈ ಹೊಸದಾಗಿ ಪತ್ತೆಯಾದ ಹೆನಿಪಾವೈರಸ್ ಕೆಲವು ಜ್ವರ ಪ್ರಕರಣಗಳಿಗೆ ಸಂಬಂಧಿಸಿದೆ. ಸೋಂಕಿತ ಜನರು ಜ್ವರ, ಆಯಾಸ, ಕೆಮ್ಮು, ಅನೋರೆಕ್ಸಿಯಾ, ಮೈಯಾಲ್ಜಿಯಾ ಮತ್ತು ವಾಕರಿಕೆ ಸೇರಿದಂತೆ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಅಧ್ಯಯನದಲ್ಲಿ ಭಾಗವಹಿಸಿದ ವಿದ್ವಾಂಸರು ಹೇಳಿದ್ದಾರೆ.
ಹೆನಿಪಾವೈರಸ್ ಗೆ ಪ್ರಸ್ತುತ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ಕಾಯಿಲೆ ನಿರ್ವಹಿಸಲು ಆರೈಕೆ ಮಾತ್ರ ಚಿಕಿತ್ಸೆಯಾಗಿದೆ. ಇದುವರೆಗೆ ಲಾಂಗ್ಯಾ ಹೆನಿಪವೈರಸ್ ಪ್ರಕರಣಗಳು ಮಾರಣಾಂತಿಕವಾಗಿಲ್ಲ. ತುಂಬಾ ಗಂಭೀರವಾಗಿಲ್ಲ, ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅಧ್ಯಯನದಲ್ಲಿ ತೊಡಗಿರುವ ಡ್ಯೂಕ್-ಎನ್‌ಯುಎಸ್ ವೈದ್ಯಕೀಯ ಶಾಲೆಯ ಉದಯೋನ್ಮುಖ ಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದ ಪ್ರಾಧ್ಯಾಪಕ ವಾಂಗ್ ಲಿನ್ಫಾ ಹೇಳಿದರು.
ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಅನೇಕ ವೈರಸ್‌ಗಳು ಮನುಷ್ಯರಿಗೆ ಸೋಂಕು ತಗುಲಿದಾಗ ಅನಿರೀಕ್ಷಿತ ಫಲಿತಾಂಶಗಳನ್ನು ಹೊಂದಿರುವುದರಿಂದ ಇದು ಇನ್ನೂ ಎಚ್ಚರಿಕೆಗೆ ಕಾರಣವಾಗಿದೆ. ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಲಾಂಗ್ಯಾ ಹೆನಿಪಾವೈರಸ್ ಸೋಂಕಿನ 35 ಪ್ರಕರಣಗಳಲ್ಲಿ 26 ಜನರಿಗೆ ಜ್ವರ, ಕಿರಿಕಿರಿ, ಕೆಮ್ಮು, ಅನೋರೆಕ್ಸಿಯಾ, ಮೈಯಾಲ್ಜಿಯಾ, ವಾಕರಿಕೆ, ತಲೆನೋವು ಮತ್ತು ವಾಂತಿ ಮುಂತಾದ ಲಕ್ಷಣಗಳು ಕಂಡು ಬಂದಿವೆ. ಹೆಚ್ಚಿನ ತನಿಖೆ, ಅಧ್ಯಯನ ನಡೆದಿದೆ ಎಂದು ವರದಿ ತಿಳಿಸಿದೆ.