ಹುಲಿಗಳ ಸಂರಕ್ಷಣೆಗೆ ಸರ್ಕಾರ ಸಾಕಷ್ಟು ಕಸರತ್ತು ನಡೆಸಿಕೊಂಡು ಬಂದಿದೆ. ಹುಲಿ ಸಂರಕ್ಷಿತ ಪ್ರದೇಶಗಳು, ಅಲ್ಲಿ ಕಠಿಣ ನಿಯಮಗಳು, ಬಿಗಿಯಾದ ಕಾನೂನು ಜಾರಿಗೊಳಿಸುವ ಮೂಲಕ ಅವುಗಳ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ.
35ಕ್ಕೂ ಹೆಚ್ಚು ನದಿಗಳು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಟ್ಟಿ ಹರಿಯುವುದರಿಂದ ದೇಶದಲ್ಲಿ ನೀರಿನ ಭದ್ರತೆಗೆ ಸಹಕಾರಿ ಎನಿಸಿದೆ. ಇಲ್ಲವಾದರೆ ನದಿ ಮೂಲಕ್ಕೇ ಪೆಟ್ಟು ಬೀಳುತ್ತಿತ್ತು.
ಇತ್ತೀಚಿನ ವಿಡಿಯೊವೊಂದು ಹುಲಿ ಸಂರಕ್ಷಿತ ಪ್ರದೇಶದ ಒಂದು ನೋಟವನ್ನು ತೋರಿಸುತ್ತದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಾಂತ ನಂದಾ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಭವ್ಯವಾದ ಏಷ್ಯನ್ ಹುಲಿಗಳ ಗುಂಪೊಂದು ನೀರಿನಲ್ಲಿ ವಿಹರಿಸುತ್ತಿರುವುದನ್ನು ನೋಡಬಹುದು.
ವಿಡಿಯೋ ಜತೆ ಶೀರ್ಷಿಕೆ ನೀಡಿರುವ ಸುಸಾಂತ ನಂದ “ನಮ್ಮ ಹುಲಿ ಮೀಸಲು ಅರಣ್ಯಗಳು ಶತಕೋಟಿ ಭಾರತೀಯರಿಗೆ ಮೂಲವಾಗಿದೆ. ಏಕೆಂದರೆ ಅಲ್ಲಿ ಅನೇಕ ಪ್ರಮುಖ ನದಿಗಳು ಹುಟ್ಟುತ್ತವೆ. ಭಾರತದಲ್ಲಿ ಹುಲಿ ಸಂರಕ್ಷಣೆಯ ಯಶಸ್ಸು ನಮ್ಮ ನೀರು ಮತ್ತು ಆಹಾರ ಭದ್ರತೆಗೆ ಪ್ರಮುಖವಾಗಿದೆ” ಎಂದು ವರ್ಣಿಸಿದ್ದಾರೆ.
ಈ ವಿಡಿಯೋ ಶೇರ್ ಮಾಡಿದ ನಂತರ, ಸಾವಿರಾರು ವೀಕ್ಷಣೆ ಗಳಿಸಿದೆ. ಹುಲಿಗಳ ರಕ್ಷಣೆ ಜತೆ ನದಿಗಳ ಸಂರಕ್ಷಣೆ ಬಗ್ಗೆ ನೆಟ್ಟಿಗರು ಮೆಚ್ಚಿಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ವರದಿಯ ಪ್ರಕಾರ 2015ರಲ್ಲಿ ವಿಶ್ವದಾದ್ಯಂತ ಹುಲಿಗಳ ಜನಸಂಖ್ಯೆಯು 40 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಜನಸಂಖ್ಯೆಗೆ ಭಾರತವು ಗಣನೀಯ ಕೊಡುಗೆಯನ್ನು ಹೊಂದಿದೆ. 50ಕ್ಕೂ ಹೆಚ್ಚು ಹುಲಿ ಸಂರಕ್ಷಿತ ಪ್ರದೇಶ ಹೊಂದಿರುವ ಭಾರತವು ಅಳಿವಿನಂಚಿನಲ್ಲಿರುವ ಹುಲಿ ರಕ್ಷಣೆಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ.
ಹುಲಿ ಮೀಸಲಿನಿಂದ ದಟ್ಟವಾದ ಅರಣ್ಯ ಪ್ರದೇಶಗಳು ಅಂತರ್ಜಲ ಮಟ್ಟದ ಪುನಶ್ಚೇತನಕ್ಕೆ ಹೆಚ್ಚು ಸಹಾಯ ಮಾಡುತ್ತವೆ. ಮಾತ್ರವಲ್ಲದೆ, ಹುಲಿ ಮೀಸಲು ಅರಣ್ಯದಿಂದ ಹವಾಮಾನ ನಿಯಂತ್ರಣ, ಜೀನ್ ಪೂಲ್ ರಕ್ಷಣೆ ಸೇರಿದಂತೆ ಅನೇಕ ಇತರ ಪ್ರಯೋಜನ ಸಹ ಇವೆ.