ಶಿವಮೊಗ್ಗ: ಅಪ್ರಾಪ್ತೆ ಮದುವೆಯಾಗಿದ್ದ ಯುವಕ ಸೇರಿದಂತೆ 11 ಜನರ ವಿರುದ್ಧ ಶಿವಮೊಗ್ಗ ತುಂಗಾನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ದಾಖಲಿಸಲಾಗಿದೆ.
ಬಾಲಕಿಯನ್ನು ಪ್ರೀತಿಸಿ ಬಾಲ್ಯ ವಿವಾಹವಾಗಿದ್ದ ಯುವಕ, ಮದುವೆ ಮಾಡಿಸಿದ ಅರ್ಚಕ, ಅಡುಗೆ ತಯಾರಕ, ಲಗ್ನಪತ್ರಿಕೆ ಮುದ್ರಕ, ಛಾಯಾಗ್ರಾಹಕರು ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾದ ಸ್ನೇಹಿತರು ಸಂಬಂಧಿಕರ ವಿರುದ್ಧವೂ ಕೇಸ್ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಗೃಹಪ್ರವೇಶ ಸಮಾರಂಭದಲ್ಲಿ ದೂರದ ಸಂಬಂಧಿಯಾಗಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡ ಯುವಕ ಸಂತೋಷ್ ಆಕೆಯನ್ನು ಪ್ರೀತಿಸಿದ್ದ. ಈ ವಿಷಯ ತಿಳಿದ ಮನೆಯವರು ಮದುವೆಗೆ ಒಪ್ಪಿದ್ದು ಜುಲೈ 31 ರಂದು ದೇವಾಲಯವೊಂದರಲ್ಲಿ ಮದುವೆಯಾಗಿತ್ತು. ಬೀಗರೂಟದ ವೇಳೆಗೆ ಮಕ್ಕಳ ಕಲ್ಯಾಣ ಸಮಿತಿಗೆ ವಿಷಯ ಗೊತ್ತಾಗಿ ಕ್ರಮ ಕೈಗೊಂಡಿದ್ದಾರೆ. ಯುವಕ ಹಾಗೂ ಬಾಲಕಿಯ ಪೋಷಕರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ.