ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಎಷ್ಟಿರಬಹುದು ಅನ್ನೋ ಕುತೂಹಲ ಸಹಜ. ಇದೀಗ ಪ್ರಧಾನಿ ಕಚೇರಿಯಿಂದ್ಲೇ ಮೋದಿ ಅವರ ಆಸ್ತಿಯ ಪಕ್ಕಾ ಲೆಕ್ಕ ಬಿಡುಗಡೆಯಾಗಿದೆ. ನಮೋ ಆಸ್ತಿಯ ಮೌಲ್ಯದಲ್ಲಿ 26 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಪ್ರಧಾನಿ ಮೋದಿಯವರ ಒಟ್ಟು ಆಸ್ತಿ ಈಗ 2.23 ಕೋಟಿ ರೂಪಾಯಿ.
ಇದರಲ್ಲಿ ಬಹುಪಾಲನ್ನು ಅವರು ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿದ್ದಾರೆ. ಆದರೆ ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ. ಗಾಂಧಿನಗರದಲ್ಲಿರುವ ತಮ್ಮ ಜಮೀನಿನ ಭಾಗವನ್ನು ದಾನ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿಯ (PMO) ವೆಬ್‌ಸೈಟ್‌ನಲ್ಲಿ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಮೋದಿ ಅವರು ಬಾಂಡ್‌ಗಳು, ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ.
ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿವೆ, ಅವುಗಳ ಮೌಲ್ಯ 1.73 ಲಕ್ಷ ರೂಪಾಯಿ. ಮೋದಿಯವರ ಚರ ಆಸ್ತಿ ವರ್ಷದ ಹಿಂದೆ ಹೋಲಿಸಿದರೆ 26.13 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ. ಪಿಎಂಒ ವೆಬ್‌ಸೈಟ್ ಪ್ರಕಾರ, ಮಾರ್ಚ್ 31, 2022ಕ್ಕೆ ಪಿಎಂ ಮೋದಿ ಅವರ ಒಟ್ಟು ಆಸ್ತಿ 2,23,82,504 ರೂಪಾಯಿ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಸತಿ ಭೂಮಿಯನ್ನು ಖರೀದಿಸಿದ್ದರು. ಅದು ಇತರ ಮೂವರ ಜಂಟಿ ಒಡೆತನದಲ್ಲಿದೆ ಮತ್ತು ಅದರಲ್ಲಿ ಎಲ್ಲರಿಗೂ ಸಮಾನ ಪಾಲು ಇತ್ತು.
ಇತ್ತೀಚಿನ ಮಾಹಿತಿ ಪ್ರಕಾರ 401/ಎ ರಿಯಲ್ ಎಸ್ಟೇಟ್ ಸರ್ವೆ ನಂಬರ್‌ನಲ್ಲಿ ಮೂವರ ಜತೆ ಜಂಟಿ ಪಾಲಿದ್ದು, ಈ 25 ಪ್ರತಿಶತವನ್ನು ಅವರು ದೇಣಿಗೆಯಾಗಿ ಪಡೆದಿಲ್ಲ. ಪ್ರಧಾನಮಂತ್ರಿಗಳ ಬಳಿ ಇರುವ ಒಟ್ಟು ನಗದು ಮೊತ್ತ 35,250 ರೂಪಾಯಿ. 9,05,105 ರೂಪಾಯಿ ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಅಂಚೆ ಕಚೇರಿಯಲ್ಲಿ 1,89,305 ರೂಪಾಯಿ ಮೌಲ್ಯದ ಜೀವ ವಿಮಾ ಪಾಲಿಸಿಗಳು ಅವರ ಬಳಿಯಿವೆ.
ತಮ್ಮ ಆಸ್ತಿ ಘೋಷಿಸಿದ ಪ್ರಧಾನಿ ಮೋದಿ ಸಂಪುಟದ ಇತರ ಸಹೋದ್ಯೋಗಿಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸೇರಿದ್ದಾರೆ. ರಾಜನಾಥ್ ಸಿಂಗ್ ಅವರು 2.54 ಕೋಟಿ ರೂಪಾಯಿ ಮೌಲ್ಯದ ಚರಾಸ್ಥಿ ಮತ್ತು 2.97 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ಮೋದಿ ಸಂಪುಟದ ಎಲ್ಲಾ 29 ಸದಸ್ಯರ ಪೈಕಿ, ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ, ಆರ್ ಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಪುರಷೋತ್ತಮ್ ರೂಪಾಲಾ ಮತ್ತು ಜಿ ರೆಡ್ಡಿ ಅವರು ತಮ್ಮ ಮತ್ತು ತಮ್ಮ ಅವಲಂಬಿತರ ಆಸ್ತಿಯನ್ನು ಘೋಷಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಕೂಡ ಕಳೆದ ಹಣಕಾಸು ವರ್ಷದಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಜುಲೈನಲ್ಲಿ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದರು.