ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಬಂದೇ ಬಿಟ್ಟಿದೆ. ಹಬ್ಬ ಹತ್ತಿರ ಬರ್ತಿದ್ದಂತೆ ಅಂಗಡಿಗಳಲ್ಲೆಲ್ಲ ಗ್ರಾಹಕರನ್ನು ಸೆಳೆಯುವ ಕಸರತ್ತು ಜೋರಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ವಿಶಿಷ್ಟ ರಾಖಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಇದರಲ್ಲಿ ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂನಿಂದ ಮಾಡಿದ ದಾರವನ್ನು ಬಳಸಲಾಗಿದೆ. ಅಷ್ಟೇ ಅಲ್ಲ ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ಅತ್ಯಂತ ಆಕರ್ಷಕವಾದ ಈ ದುಬಾರಿ ರಾಖಿಯ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ.
ದೀಪಕ್ ಭಾಯಿ ಚೋಕ್ಸಿ ಎಂಬುವವರು ಈ ವಿಶಿಷ್ಟ ರಾಖಿಯನ್ನು ತಯಾರಿಸಿದ್ದಾರೆ. ರಕ್ಷಾಬಂಧನದ ದಿನ ಆಭರಣದಂತೆಯೂ ಇದನ್ನು ಧರಿಸಬಹುದು ಎನ್ನುತ್ತಾರೆ ಅವರು. ಈ ಮಳಿಗೆಯಲ್ಲಿ 400 ರೂಪಾಯಿಯಿಂದ ಆರಂಭವಾಗಿ 5 ಲಕ್ಷ ರೂಪಾಯಿ ಬೆಲೆಬಾಳುವ ರಾಖಿಗಳಿವೆ.
ಹಳ್ಳಿಗಳಲ್ಲಿ ಈಗಲೂ ರೇಷ್ಮೆ ದಾರದಿಂದ ಮಾಡಿದ ರಾಖಿಯನ್ನು ಸಹೋದರರಿಗೆ ಕಟ್ಟುವುದು ಸಂಪ್ರದಾಯ. ಆದ್ರೆ ನಗರಗಳಲ್ಲಿ ಟ್ರೆಂಡ್ ಬದಲಾಗಿದೆ. ವಿಭಿನ್ನ, ವಿಶಿಷ್ಟ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಅದೇನೇ ಆಗಿದ್ರೂ ಅಣ್ಣನಿಗೆ ರಾಖಿ ಕಟ್ಟಿ ಸದಾ ತನ್ನನ್ನು ರಕ್ಷಣೆ ಮಾಡುವಂತೆ ತಂಗಿ ಬೇಡುವುದು, ಆಕೆಗೆ ಉಡುಗೊರೆ ಕೊಟ್ಟು ಸಂಭ್ರಮಿಸುವುದು ಈ ಹಬ್ಬದ ಸಂಪ್ರದಾಯ.