ಮಹಾನಗರಗಳಲ್ಲಿ ಹಣ ಉಳಿಸಲು ರೂಮ್ ಅಥವಾ ಫ್ಲಾಟ್ ಗಳನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಒಮ್ಮೊಮ್ಮೆ ಸ್ನೇಹಿತರು ಸಿಗದಿದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ರೂಮ್ ಮೇಟ್ ಗಳ ಹುಡುಕಾಟ ನಡೆಸುತ್ತಾರೆ. ಹೀಗೆ ರೂಮ್ ಮೇಟ್ ಹುಡುಕಲು ಮುಂದಾದ ವ್ಯಕ್ತಿಯೊಬ್ಬರು ಹಣದ ಜೊತೆಗೆ ದುಬಾರಿ ಮೊಬೈಲ್ ಕಳೆದುಕೊಂಡಿದ್ದಾರೆ.
ಘಟನೆಯ ವಿವರ: ಬ್ಯಾಂಕ್ ಉದ್ಯೋಗಿ ಅಶಿತೋಷ್ ಮಿಶ್ರಾ ಎಂಬವರು ದಿವ್ಯಮ್ ಎಂಬವರ ಜೊತೆ ಉತ್ತರ ಬೆಂಗಳೂರಿನ ಬ್ಯಾಟರಾಯನಪುರದ ಕಾಶೀನಗರದಲ್ಲಿ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಇಬ್ಬರೊಂದಿಗೆ ಮತ್ತೊಬ್ಬರು ಬಂದರೆ ಒಂದಷ್ಟು ಹಣ ಉಳಿಸಬಹುದು ಎಂಬ ಕಾರಣಕ್ಕೆ ಆಗಸ್ಟ್ ಒಂದರಂದು ದಿವ್ಯಮ್ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಹಿತ ಚೌಧರಿ ಎಂಬ ವ್ಯಕ್ತಿ ದಿವ್ಯಮ್ ಅವರನ್ನು ಸಂಪರ್ಕಿಸಿ ಫ್ಲಾಟ್ ನೋಡಲು ಬರುವುದಾಗಿ ಹೇಳಿದ್ದ. ಆ ಬಳಿಕ ವಾಟ್ಸಾಪ್ ಮೂಲಕ ಸ್ಥಳದ ಮಾಹಿತಿ ಪಡೆದು ಆಗಸ್ಟ್ 6 ರಂದು ಬೆಳಗ್ಗೆ 11 ಗಂಟೆಗೆ ಫ್ಲ್ಯಾಟಿಗೆ ಬಂದಿದ್ದಾನೆ.
ಆ ಸಂದರ್ಭದಲ್ಲಿ ಅಶಿತೋಷ್ ಹಾಗೂ ದಿವ್ಯಮ್ ಇಬ್ಬರೂ ಇದ್ದು, ಫ್ಲಾಟ್ ತೋರಿಸಿದ್ದಾರೆ. ಇದರಿಂದ ಖುಷಿಯಾದಂತೆ ನಟಿಸಿದ ಆ ವ್ಯಕ್ತಿ ಫ್ಲಾಟ್ ಗೆ ಬರುವುದಾಗಿ ತಿಳಿಸಿದ್ದಾನೆ. ನಂತರ ಅಶಿತೋಷ್ ಸ್ನಾನಕ್ಕೆ ಹೋದರೆ ದಿವ್ಯಮ್ ಮೊಬೈಲ್ ಕಾಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭ ಸಾಧಿಸಿ ಆ ವ್ಯಕ್ತಿ ಆನ್ಲೈನ್ ಮುಖಾಂತರ 50,000 ಟ್ರಾನ್ಸ್ಫರ್ ಮಾಡಿಕೊಂಡಿದ್ದಲ್ಲದೆ ದುಬಾರಿ ಮೊಬೈಲ್ ಎಗರಿಸಿದ್ದಾನೆ. ಬಳಿಕ ಸದ್ದಿಲ್ಲದೆ ಅಲ್ಲಿಂದ ತೆರಳಿದ್ದಾನೆ.