ದೈನಂದಿನ ಜೀವನದಲ್ಲಿ ಇಂಟರ್ನೆಟ್ ಇಂದು ಅವಿಭಾಜ್ಯ ಅಂಗವಾಗಿದೆ. ಆದರೆ ಇಂಟರ್ನೆಟ್ ವೇಗದ ಕುರಿತು ಆಗಾಗ ಅಪಸ್ವರಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಈ ಅಪಸ್ವರಕ್ಕೆ ಅಂತ್ಯ ಹಾಡಲೆಂಬಂತೆ 5 G ಸೇವೆ ಭಾರತದಲ್ಲಿ ಆರಂಭವಾಗುತ್ತಿದೆ. ಈ ಕುರಿತು ಮಹತ್ವದ ಮಾಹಿತಿಯೊಂದು ಇಲ್ಲಿದೆ.
ಈಗಾಗಲೇ 5G ತರಂಗಾಂತರದ ಹರಾಜು ಪೂರ್ಣಗೊಂಡಿದ್ದು, ರಿಲಯನ್ಸ್ ಜಿಯೋ, ಏರ್ಟೆಲ್, ಐಡಿಯಾ ವೊಡಾಫೋನ್ ಜೊತೆಗೆ ಈ ಬಾರಿ ಗೌತಮ್ ಅದಾನಿ ಅವರ ಕಂಪನಿಯೂ ಸಹ ಬಿಡ್ ನಲ್ಲಿ ಭಾಗವಹಿಸಿತ್ತು. 1.50 ಲಕ್ಷ ಕೋಟಿ ರೂಪಾಯಿ ಮೊತ್ತದ ಬಿಡ್ ಗಳು ಸಲ್ಲಿಕೆಯಾಗಿದ್ದು, 5G ಸೇವೆ ಆರಂಭಕ್ಕೆ ಪೂರ್ವ ತಯಾರಿಗಳೂ ಸಹ ಪೂರ್ಣಗೊಂಡಿವೆ ಎನ್ನಲಾಗಿದೆ.
ದೂರಸಂಪರ್ಕ ಖಾತೆ ರಾಜ್ಯ ಸಚಿವ ದೇವು ಸಿಂಹ ಚೌಹಾನ್ ಸೋಮವಾರದಂದು ಈ ಕುರಿತು ಮಾಹಿತಿ ನೀಡಿದ್ದು, ಅತಿ ವೇಗದ ಇಂಟರ್ನೆಟ್ ಸೇವೆ ಒದಗಿಸುವ 5G ಇನ್ನೊಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲೂ ಈ ಸೇವೆಗಳು ಲಭ್ಯವಾಗುವಂತೆ ಮಾನದಂಡಗಳನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.