
ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಎರಡು ವಾರದಿಂದ ಸೂರ್ಯನ ದರ್ಶನವಾಗಿಲ್ಲ.
ಭಾರಿ ಮಳೆಯ ಜೊತೆಗೆ ರಾಜ್ಯದ ಹಲವೆಡೆ ಶೀತಗಾಳಿ ಜೋರಾಗಿದೆ. ಶೀತ ಗಾಳಿಯಿಂದ ರಾಜ್ಯದ ತಾಪಮಾನ ಕಡಿಮೆಯಾಗಿದ್ದು, ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಚಿಕ್ಕಮಗಳೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದ ಸರಾಸರಿ ತಾಪಮಾನ ಕಳೆದ ಒಂದು ವಾರದ ಅವಧಿಯಲ್ಲಿ ಗರಿಷ್ಠ 30 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾದ ಕಾರಣ ಥಂಡಿ ಗಾಳಿ ಬೀಸಿದೆ,
ವಾತಾವರಣದಲ್ಲಿ ತೇವಾಂಶ ಇದ್ದು ಶೀತ ಗಾಳಿ ಕಾರಣ ಜನರಲ್ಲಿ ಶೀತ, ಗಂಟಲುನೋವು, ನೆಗಡಿ, ಕೆಮ್ಮು, ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದೆ. ಸೂರ್ಯನ ದರ್ಶನವಾಗದೆ ಎರಡು ವಾರಗಳೇ ಕಳೆದಿವೆ. ಸೂರ್ಯನ ಬೆಳಕಿಗೆ ಕಾಯುವ ಪರಿಸ್ಥಿತಿ ಎದುರಾಗಿದೆ. ಶೀತ ಗಾಳಿ ಪ್ರಭಾವದಿಂದ ಜನರಿಗೆ ಮಾತ್ರವಲ್ಲ, ಜಾನುವಾರುಗಳು, ವಿವಿಧ ಚಟುವಟಿಕೆಗಳ ಮೇಲೆಯೂ ಪರಿಣಾಮ ಉಂಟಾಗಿದೆ. ಒಟ್ಟಿನಲ್ಲಿ ಮಹಾಮಳೆ ಜೊತೆಗೆ ಶೀತಗಾಳಿಯಿಂದ ಜನ ತತ್ತರಿಸಿಹೋಗಿದ್ದಾರೆ.