ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ಮೂಲದ ಭಾರತೀಯ ವಿದ್ಯಾರ್ಥಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ವೇದಾಂತ್ ಆನಂದವಾಡೆ 1.3 ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ಪಡೆದವರಾಗಿದ್ದು, ಅವರು ಅಮೆರಿಕಾದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪೂರ್ವ ನ್ಯೂರೋ ಸೈನ್ಸ್ ಮತ್ತು ಫಿಸಿಯೋಲಾಜಿ ವ್ಯಾಸಂಗ ಮಾಡಲಿದ್ದಾರೆ.
ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಕಲಿತ 17 ಮಂದಿ ಈಗಾಗಲೇ ನೊಬೆಲ್ ಪ್ರಶಸ್ತಿಗೆ ಪುರಸ್ಕೃತರಾಗಿರುವುದು ಗಮನಾರ್ಹ ಸಂಗತಿಯಾಗಿದೆ. 18 ವರ್ಷದ ವೇದಾಂತ್ ಆನಂದವಾಡೆ, ಹವಾಮಾನ ಕುರಿತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಹಿನ್ನೆಲೆಯಲ್ಲಿ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅವಕಾಶ ಲಭಿಸಿದೆ.
ವೇದಾಂತ್, ನವೆಂಬರ್ ತಿಂಗಳಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹವಾಮಾನ ಕುರಿತ ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ಆ ಬಳಿಕ ಅವರು ಅಮೆರಿಕಾಗೆ ತೆರಳಿ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗ ಮುಂದುವರಿಸಲಿದ್ದಾರೆ. ವೇದಾಂತ್ ಸರ್ಜನ್ ಆಗುವ ಹಂಬಲವಿಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಪಡೆಯಲಿದ್ದಾರೆ.