25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಗೆ 24 ವಾರಗಳ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅವಕಾಶ ನೀಡಿರುವ ಸುಪ್ರೀಂ ಕೋರ್ಟ್ ನಿರ್ಧಾರ, ಇತರ ಅವಿವಾಹಿತ ಮಹಿಳೆಯರಿಗೂ ಗರ್ಭಪಾತಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಜೆ.ಬಿ. ಪಾರ್ದಿವಾಲಾ ಅವರಿದ್ದ ಪೀಠ ವೈದ್ಯಕೀಯ ಗರ್ಭಾವಸ್ಥೆಯ [ಎಂಟಿಪಿ] ಕಾಯಿದೆ, 1971 ರ ಅಡಿಯಲ್ಲಿ ವಿವಾಹಿತ ಮಹಿಳೆಯರಿಗೆ ಗರ್ಭಪಾತಕ್ಕೆ ಅನುಮತಿಸಲು ಸಾಧ್ಯವಿಲ್ಲ ಎಂಬಂತೆ ತೋರುತ್ತಿದೆ ಅಂತಾ ಹೇಳಿದೆ. ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳು ಗರ್ಭಪಾತಕ್ಕೆ ಅನುಮತಿಯನ್ನು ನಿರಾಕರಿಸುತ್ತಿವೆ. ಆದರೆ ಗರ್ಭಾವಸ್ಥೆಯ ಅಪಾಯ ಅವಿವಾಹಿತ ಮತ್ತು ವಿವಾಹಿತ ಮಹಿಳೆಯರಿಬ್ಬರಿಗೂ ಒಂದೇ ಅಂತಾ ಹೇಳಿದ್ದಾರೆ.
“20 ವಾರಗಳಿಗಿಂತ ಹೆಚ್ಚು ಸಮಯದವರೆಗೆ ಗರ್ಭ ಹೊತ್ತಿರುವ ಅವಿವಾಹಿತ ಮಹಿಳೆ ವಿವಾಹಿತ ಮಹಿಳೆಯಂತೆಯೇ ಮಾನಸಿಕ ದುಃಖವನ್ನು ಅನುಭವಿಸಬಹುದು. ವಿವಾಹಿತ ಮಹಿಳೆಗೆ ಗರ್ಭಪಾತಕ್ಕೆ ಅನುಮತಿಸಿದರೆ ಅವಿವಾಹಿತ ಮಹಿಳೆಯನ್ನೇಕೆ ಹೊರಗಿಡಬೇಕು?”ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು. “ಇದರ ಸುತ್ತ ಸಾಕಷ್ಟು ಬೆಳವಣಿಗೆಗಳಾದಾಗ ನಾವು ಸಹ ಮುಂದುವರಿಯಬೇಕು. ನ್ಯಾಯಶಾಸ್ತ್ರದ ವಿಕಾಸಕ್ಕೆ ನಾವು ಜವಾಬ್ದಾರರಾಗಿದ್ದೇವೆ. “ಸ್ಪಷ್ಟವಾಗಿ ನಿರಂಕುಶವಾಗಿರುವುದಕ್ಕಾಗಿ” ನಿರ್ಬಂಧಿತ ಷರತ್ತನ್ನು ಮುರಿಯಬಹುದೆಂದು ಪೀಠ ಹೇಳಿದೆ.
ಇದು ಅವಿವಾಹಿತ ಮಹಿಳೆಯರಿಗೆ 20 ವಾರಗಳಿಗಿಂತ ಹೆಚ್ಚಿನ ಗರ್ಭವನ್ನು ಕೊನೆಗೊಳಿಸುವ ಪ್ರಯೋಜನವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. “ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ನ್ಯಾಯಾಲಯ ಗಮನಿಸಿದೆ. MTP ಕಾಯಿದೆಯನ್ನು ಉಲ್ಲೇಖಿಸಿದ ನ್ಯಾಯಾಲಯ, 2021 ರಲ್ಲಿ ಕಾನೂನನ್ನು ತಿದ್ದುಪಡಿ ಮಾಡುವಾಗ ಶಾಸಕಾಂಗದ ಉದ್ದೇಶವನ್ನು ಸೂಚಿಸಿತು ಮತ್ತು ತಿದ್ದುಪಡಿ ಮಾಡಲಾದ ಕಾಯಿದೆಯು ‘ಪಾಲುದಾರ’ ಪದವನ್ನು ಬಳಸಿದೆ, ‘ಪತಿ’ ಅಲ್ಲ ಎಂದು ಹೇಳಿದೆ. ಆದ್ದರಿಂದ ಇದು ಮದುವೆಯ ಹೊರಗಿನ [ಸಂಬಂಧಗಳಿಗೆ] ಸಂಬಂಧಿಸಿದೆ ಎಂದು ಹೇಳಿದೆ.
ಕಾನೂನಿನ ನಿಯಮ 3B ಕೆಲವು ವರ್ಗಗಳ ಮಹಿಳೆಯರನ್ನು ಗುರುತಿಸುತ್ತದೆ. ಉದಾಹರಣೆಗೆ ವಿಚ್ಛೇದಿತರು, ವಿಧವೆಯರು, ಅಪ್ರಾಪ್ತ ವಯಸ್ಕರು, ಅಂಗವಿಕಲರು ಮತ್ತು ಮಾನಸಿಕ ಅಸ್ವಸ್ಥ ಮಹಿಳೆಯರು, ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರದಿಂದ ಬದುಕುಳಿದವರು. ನಿರ್ದಿಷ್ಟ ಸಂದರ್ಭಗಳಲ್ಲಿ ವೈದ್ಯಕೀಯವಾಗಿ ಗರ್ಭವನ್ನು ಅಂತ್ಯಗೊಳಿಸಲು ಇವರೆಲ್ಲ ಅರ್ಹರಾಗಿದ್ದಾರೆ, ಈ ಪಟ್ಟಿಯಲ್ಲಿ ಅವಿವಾಹಿತ ಮಹಿಳೆಯರ ಉಲ್ಲೇಖವಿಲ್ಲ.
ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸುತ್ತ, ಇಲ್ಲಿ ಪ್ರಶ್ನೆ ಇರುವುದು ವಿವಾಹಿತ ಅಥವಾ ಅವಿವಾಹಿತರ ಬಗ್ಗೆ ಅಲ್ಲ. ಮಹಿಳೆಯ ಯೋಗಕ್ಷೇಮದ ಬಗ್ಗೆ. 24 ವಾರ ಗರ್ಭ ಹೊರುವುದು ಸುಲಭವಲ್ಲ ಎಂದು ಹೇಳಿದರು. ಇದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಸಲಹೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಈ ಪ್ರಕರಣ ತಮಗೆ ಸಾಕಷ್ಟು ಬೌದ್ಧಿಕ ವೇದನೆಯನ್ನು ಉಂಟುಮಾಡಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ. ಈಗ ತೀರ್ಪನ್ನು ಹೇಗೆ ರಚಿಸುವುದು ಎಂಬ ಬಗ್ಗೆ ಸಾಕಷ್ಟು ಯೋಚಿಸಬೇಕಾಗಿದೆ ಎಂದಿದ್ದಾರೆ. ಜುಲೈ 22 ರಂದು ಮಣಿಪುರದ ಅವಿವಾಹಿತ ಮಹಿಳೆಗೆ 24 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿಸಿತ್ತು. ಹೈಕೋರ್ಟ್ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಒಮ್ಮತದ ಸಂಬಂಧದ ಪರಿಣಾಮವಾಗಿ ಗರ್ಭ ಧರಿಸಿದ್ದು, ತಮ್ಮ ನಡುವಿನ ಸಂಬಂಧ ವಿಫಲವಾದ ಕಾರಣ ಗರ್ಭಪಾತಕ್ಕೆ ಅವಕಾಶ ಕೊಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು.