ಬೆಂಗಳೂರು: ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮೀಸಲಾತಿ ವಿಚಾರದಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಬಿಎಂಪಿ ವಾರ್ಡ್ ವಾರು ಮೀಸಲಾತಿ ವಿಚಾರದಲ್ಲಿ ಮಹಿಳೆಯರಿಗೆ ಅನಗತ್ಯ ಮೀಸಲಾತಿ ನೀಡಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮನ್ನು ಮಹಿಳಾ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸೂಕ್ತವಾಗಿ ಮೀಸಲಾತಿಯನ್ನು ಪ್ರಕಟಿಸಲಿ ಎಂದು ಹೇಳಿದರು.
ಇದೇ ವೇಳೆ ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಕಾರಣಕ್ಕೆ ಕಾಂಗ್ರೆಸ್ ಗೆ ಮತ ಹಾಕಬಾರದು ಎಂದು ಮತದಾರರ ಪಟ್ಟಿಯಿಂದ ಅಹಿಂದ ಮತವನ್ನು ತೆಗೆಯುತ್ತಿದ್ದಾರೆ. ಲಕ್ಷಾಂತರ ಅಹಿಂದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.