ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ಮಗಳ ಪ್ರೇಮ ಪ್ರಕರಣದಿಂದ ಸಿಟ್ಟಿಗೆದ್ದ ತಂದೆ ಆಕೆಯನ್ನು ಕೊಲ್ಲಲು ಆಸ್ಪತ್ರೆಯ ವಾರ್ಡ್ ಬಾಯ್ ಗೆ 1 ಲಕ್ಷ ರೂ. ನೀಡಿದ್ದಾನೆ.
ವಾರ್ಡ್ ಬಾಯ್ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಇಂಜೆಕ್ಷನ್ ನೀಡಿದ್ದರಿಂದ ಆಕೆಯ ಆರೋಗ್ಯ ಹಠಾತ್ ಕ್ಷೀಣಿಸಲು ಕಾರಣವಾಗಿದೆ. ಮಹಿಳೆಯ ತಂದೆ ನವೀನ್ ಕುಮಾರ್, ವಾರ್ಡ್ ಬಾಯ್ ನರೇಶ್ ಕುಮಾರ್ ಮತ್ತು ಆಸ್ಪತ್ರೆಯ ಮಹಿಳಾ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೀನ್ ಕುಮಾರ್ ತನ್ನ ಮಗಳನ್ನು ಆಗಸ್ಟ್ 5 ರಂದು ತಡರಾತ್ರಿ ಕಂಕರಖೇಡಾದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಕೆಲವು ಗಂಟೆಗಳ ನಂತರ ಅವರು ಮೋಡಿಪುರಂನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ರಾತ್ರಿ ವೇಳೆ ಹುಡುಗಿಯ ಆರೋಗ್ಯ ಹಠಾತ್ ಹದಗೆಟ್ಟಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿದಾಗ ಆಕೆಗೆ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕ್ಲೋರೈಡ್ ಅನ್ನು ಚುಚ್ಚಲಾಗಿದೆ ಎಂದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಚುಚ್ಚುಮದ್ದನ್ನು ನೀಡಿದ ವ್ಯಕ್ತಿಯನ್ನು ನರೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿಚಾರಣೆ ವೇಳೆ ನರೇಶ್ ಕುಮಾರ್ ಯುವತಿಯ ತಂದೆ ತನಗೆ 1 ಲಕ್ಷ ರೂಪಾಯಿ ನೀಡಿದ್ದಾಗಿ ಹೇಳಿದ್ದಾನೆ. ವೈದ್ಯನಂತೆ ನಟಿಸಿ ಮಹಿಳಾ ಉದ್ಯೋಗಿಯ ಸಹಾಯದಿಂದ ಐಸಿಯುಗೆ ಪ್ರವೇಶಿಸಿ ಚುಚ್ಚುಮದ್ದನ್ನು ನೀಡಿದ್ದಾನೆ.
ನಂತರ ನವೀನ್ ಕುಮಾರ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ, ತನ್ನ ಮಗಳು ಒಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಸಂಬಂಧ ಕೊನೆಗೊಳಿಸಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೇಲ್ಛಾವಣಿಯಿಂದ ಬಿದ್ದಿರುವುದಾಗಿ ವೈದ್ಯರಿಗೆ ತಿಳಿಸಿದ್ದ ನವೀನ್ ಹೇಳಿಕೆ ಬದಲಿಸಿ ಆಕೆ ಛಾವಣಿಯಿಂದ ಜಿಗಿದಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಾರ್ಡ್ ಬಾಯ್ನಿಂದ ಕೆಲವು ಪೊಟ್ಯಾಸಿಯಮ್ ಕ್ಲೋರೈಡ್ ಔಷಧಿ ಮತ್ತು 90,000 ರೂ.ವಶಪಡಿಸಿಕೊಂಡಿದ್ದಾರೆ.