ಮಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ ವಹಿಸಿದ್ದ ಮೀನುಗಾರರು ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ಅಪಾಯ ತಂದುಕೊಂಡಿದ್ದಾರೆ. ಆದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಅಲೆಗಳ ಅಬ್ಬರ ಹೆಚ್ಚಿದ್ದು, ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಆಳ ಸಮುದ್ರದಲ್ಲಿ ಮುಳುಗಿ ಹೋಗಿದೆ. ಮಂಗಳೂರಿನ 30 ನಾಟಿಕಲ್ ದೂರದಲ್ಲಿ ಈ ಘಟನೆ ಸಂಭವಿಸಿದ್ದು, ಬೋಟ್ ನಲ್ಲಿ 10 ಜನರಿದ್ದರು.
ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗುತ್ತಿದ್ದಂತೆ ಮತ್ತೊಂದು ಬೋಟ್ ರಕ್ಷಣೆಗಾಗಿ ಧಾವಿಸಿದೆ. ಮುಳುಗುತ್ತಿದ್ದ ಬೋಟ್ ನಲ್ಲಿದ್ದ 10 ಜನರು ಸಮುದ್ರದಲ್ಲಿ ಈಜುತ್ತಾ ಬಂದು ಮತ್ತೊಂದು ಬೋಟ್ ಹತ್ತಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.