ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಮಹತ್ವದ ಕಾರ್ಯಾಚರಣೆ ನಡೆಸಿದ ಎನ್ಐಎ ಐಸಿಸ್ ಸಕ್ರಿಯ ಸದಸ್ಯನನ್ನು ಬಂಧಿಸಿದೆ.
ದೆಹಲಿಯ ಬಟ್ಲಾ ಹೌಸ್ ನಲ್ಲಿ ಶೋಧ ನಡೆಸಿದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಇಸ್ಲಾಮಿಕ್ ಸ್ಟೇಟ್(ಐಎಸ್‌ಐಎಸ್) ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರೋಪಿ ಮೊಹ್ಸಿನ್ ಅಹ್ಮದ್ ನನ್ನು ಶನಿವಾರ ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ತನಿಖಾ ಸಂಸ್ಥೆಯ ಪ್ರಕಾರ, ಅಹ್ಮದ್ ಪಾಟ್ನಾ ನಿವಾಸಿಯಾಗಿದ್ದು ಐಸಿಸ್‌ನ ಸಕ್ರಿಯ ಸದಸ್ಯ. ಭಾರತ ಮತ್ತು ವಿದೇಶಗಳಲ್ಲಿ ಸಹಾನುಭೂತಿ ಹೊಂದಿರುವವರಿಂದ ಐಸಿಸ್‌ಗಾಗಿ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಐಸಿಸ್‌ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಅವರು ಈ ಹಣವನ್ನು ಸಿರಿಯಾ ಮತ್ತು ಇತರ ಸ್ಥಳಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದ ಎಂದು ಎನ್‌ಐಎ ಹೇಳಿದೆ.
ಈ ವಾರದ ಆರಂಭದಲ್ಲಿ, ಐಸಿಸ್ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕರ್ನಾಟಕದಲ್ಲಿ ಮೂವರನ್ನು ಎನ್‌ಐಎ ವಶಕ್ಕೆ ಪಡೆದಿತ್ತು. ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶ, ಗುಜರಾತ್, ಬಿಹಾರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳಲ್ಲಿ ಶಂಕಿತರ 13 ಸ್ಥಳಗಳಲ್ಲಿ ಸಂಸ್ಥೆ ಶೋಧ ನಡೆಸಿತ್ತು.