ಚೆನ್ನೈ: ಅಕ್ಕಿ ಮೇಲಿನ ಜಿ.ಎಸ್.ಟಿ. ತಪ್ಪಿಸಲು ಹೊಸ ಪ್ಲಾನ್ ಮಾಡಿಕೊಂಡಿರುವ ತಮಿಳುನಾಡು ವರ್ತಕರು 26 ಕೆಜಿ ಮೂಟೆಯಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದಾರೆ. 25 ಕೆಜಿ ಅಕ್ಕಿ ಮೂಟೆಗೆ ಶೇಕಡ 5ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತದೆ. 26 ಕೆಜಿ ಚೀಲಕ್ಕೆ ಜಿ.ಎಸ್.ಟಿ. ಇರುವುದಿಲ್ಲ.
ಅಂದಹಾಗೆ, ಅಕ್ಕಿಯನ್ನು 5 ಕೆಜಿ, 10 ಕೆಜಿ, 25 ಕೆಜಿ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜಿ.ಎಸ್.ಟಿ. ವಿಧಿಸುವ ಕಾರಣ 26 ಕೆಜಿ ಚೀಲಗಳಲ್ಲಿ ಅಕ್ಕಿ ಪ್ಯಾಕ್ ಮಾಡಲು ವರ್ತಕರು ಮುಂದಾಗಿದ್ದು, ಈ ಮೂಲಕ ತೆರಿಗೆ ತಪ್ಪಿಸಿಕೊಳ್ಳಲು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.
25 ಕೆಜಿಗಿಂತ ಕಡಿಮೆ ತೂಕದ ಅಕ್ಕಿ ಚೀಲಗಳನ್ನು ಚಿಲ್ಲರೆ ಮಾರಾಟ ಎಂದು ಸರ್ಕಾರ ಪರಿಗಣಿಸಿ ಜಿಎಸ್ಟಿ ವಿಧಿಸುತ್ತದೆ. ಹೀಗಾಗಿ ಎರಡರಿಂದ ಮೂರು ರೂಪಾಯಿ ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. 25 ಕೆಜಿಯ ಅಕ್ಕಿ ಚೀಲಕ್ಕೆ 50 ರಿಂದ 80 ರೂಪಾಯಿ ಹೆಚ್ಚು ಹಣ ಕೊಡಬೇಕಾಗುತ್ತದೆ. ಹೀಗಾಗಿ 26 ಕೆಜಿ ಅಕ್ಕಿ ಚೀಲದಲ್ಲಿ ಪ್ಯಾಕ್ ಮಾಡಿದರೆ ಜಿ.ಎಸ್.ಟಿ. ಕಟ್ಟಬೇಕಿಲ್ಲ. ಬ್ರಾಂಡೇತರ ಪ್ಯಾಕ್ ಮತ್ತು ಲೇಬಲ್ ಮಾಡಿದ 25 ಕೆಜಿ ಒಳಗಿನ ಎಲ್ಲಾ ಅಕ್ಕಿ ಚೀಲಗಳ ಮೇಲೆಯೂ ಶೇಕಡ 5 ರಷ್ಟು ಜಿಎಸ್ಟಿ ವಿಧಿಸುತ್ತಿದ್ದು, ಸಣ್ಣ ಪ್ರಮಾಣದಲ್ಲಿ ದಿನಬಳಕೆ ವಸ್ತು ಖರೀದಿಸುವವರಿಗೆ ಸಂಕಷ್ಟ ಎದುರಾಗಿದೆ. ಸಣ್ಣ ಪ್ರಮಾಣದಲ್ಲಿ ಅಕ್ಕಿ ಖರೀದಿಸುವ ಗ್ರಾಹಕರು ಹೆಚ್ಚುವರಿ ಹಣವನ್ನು ತೆರಿಗೆ ರೂಪದಲ್ಲಿ ಕೊಡಬೇಕಿದೆ. ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಮೇಲಿನ ಜಿಎಸ್ಟಿ ಕೈ ಬಿಡುವಂತೆ ಸರ್ಕಾರಕ್ಕೆ ಒತ್ತಾಯ ಕೇಳಿಬಂದಿದೆ.