ಬಾಲಕನೊಬ್ಬ ತನ್ನ ಶಾಲೆಯ ಆತಂಕಕಾರಿ ಸ್ಥಿತಿಯನ್ನು ವರದಿಗಾರನ ರೂಪದಲ್ಲಿ ಪ್ರಸ್ತುತಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾರ್ಖಂಡ್‌ನ ಭಿಖಿಯಾಚಕ್ ಗ್ರಾಮದ ಹುಡುಗನೊಬ್ಬ ತನ್ನ ಶಾಲೆಯ ಕೊಠಡಿಗಳು, ವಾಶ್‌ರೂಮ್ ಮತ್ತು ಕೈ ಪಂಪ್‌ಗಳ ಸ್ಥಿತಿಯನ್ನು ವರದಿಗಾರನ ರೀತಿ ವರದಿ ಮಾಡುತ್ತಾ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಹನ್ನೆರಡು ವರ್ಷದ ಸರ್ಫರಾಜ್ ಖಾನ್ ಕೋಲು ಮತ್ತು ಖಾಲಿ ಕೋಕ್ ಬಾಟಲಿಯನ್ನು ಮೈಕ್ ರೀತಿ ಮಾಡಿಕೊಂಡರೆ ಈ ದೃಶ್ಯಗಳನ್ನು ರೆಕಾರ್ಡ್ ಮಾಡಲು ಖಾನ್ ತನ್ನ ಸಹಪಾಠಿಗಳಲ್ಲಿ ಒಬ್ಬನನ್ನು ಕರೆದುಕೊಂಡು ಬಳಸಿಕೊಂಡಿದ್ದ.
ಈ ವಿಡಿಯೋವನ್ನು ವಿಷ್ಣುಕಾಂತ್ ಎಂಬ ಪತ್ರಕರ್ತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹುಡುಗನಿಗೆ ತರಬೇತಿಯಿಲ್ಲದಿದ್ದರೂ, ವರದಿ ಮಾಡುವ ಅವನ ಉತ್ಸಾಹವು ಅವನ ಧ್ವನಿಯಲ್ಲಿ ಪ್ರತಿಫಲಿಸುತ್ತದೆ ಎಂದಿದ್ದಾರೆ.
ಆ ಬಾಲಕ ತನ್ನ ಸಹಪಾಠಿಗಳಲ್ಲಿ ಒಬ್ಬನನ್ನು ಸಂದರ್ಶಿಸಿ, ನೀನೇಕೆ ನಿಯಮಿತವಾಗಿ ಶಾಲೆಗೆ ಬರುವುದಿಲ್ಲ? ಎಂದು ಪ್ರಶ್ನೆ ಕೇಳುತ್ತಾನೆ.
ಕೊಠಡಿಗಳಲ್ಲಿನ ಕೊಳಕು ಮತ್ತು ಅನಗತ್ಯ ವಸ್ತುಗಳನ್ನು ಅಲ್ಲಿ ಕಾಣಬಹುದು. ಸರಕಾರದಿಂದ ಬರುವ ಶೈಕ್ಷಣಿಕ ನಿಧಿ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಬಾಲಕ ಪ್ರತಿಪಾದಿಸಿದ್ದು ವಿಶೇಷವಾಗಿತ್ತು.
ಅಲ್ಲಿನ ನೀರಿನ ತೊಟ್ಟಿ ಹಾಗೂ ಕೈಪಂಪ್ ದುರಸ್ತಿಗೊಳಿಸುವಂತೆಯೂ ಕೇಳಿದ್ದು, ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯಾಗಿದೆ. ಶಿಕ್ಷಕರು ಸಮಯಕ್ಕೆ ಬಾರದೇ ಇರುವ ಸಂಗತಿಯನ್ನು ಆತ ಹೇಳುವುದು ಗಮನಾರ್ಹ ಸಂಗತಿ.