2020ರ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೇರಳದ ಕೊಯಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ಭೀಕರ ಅಪಘಾತ ನಿಮಗೆ ನೆನಪಿರಬಹುದು. ಈ ಅಪಘಾತದಲ್ಲಿ 21 ವಿಮಾನ ಪ್ರಯಾಣಿಕರು ಮೃತಪಟ್ಟು 169 ಮಂದಿ ಗಾಯಗೊಂಡಿದ್ದರು.
‘ವಂದೇ ಭಾರತ್’ ಅಭಿಯಾನದ ಅಡಿ ದುಬೈನಿಂದ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ವೇಳೆ ರನ್ ವೇ ನಿಂದ ಜಾರಿ ಕಂದಕಕ್ಕೆ ಉರುಳಿದ್ದ ಪರಿಣಾಮ ಈ ಅವಘಡ ಸಂಭವಿಸಿತ್ತು.
ಈ ಅಪಘಾತ ನಡೆದಿದ್ದ ವೇಳೆ ಕಡು ಕತ್ತಲಿನಲ್ಲೂ ಸಂತ್ರಸ್ತರ ನೆರವಿಗೆ ಮೊದಲಿಗೆ ಧಾವಿಸಿದ್ದೇ ಸ್ಥಳೀಯರು. ಅಪಾಯವನ್ನು ಲೆಕ್ಕಿಸದೆ ನೆರವಿಗೆ ಮುಂದಾದ ಕಾರಣ ಬಹುತೇಕರು ಸಾವಿನಿಂದ ಪಾರಾಗಿದ್ದರು.
ಅಂದು ತಮಗೆ ನೆರವಾದ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಲು ಈಗ ವಿಮಾನ ಅಪಘಾತ ಸಂತ್ರಸ್ತರು ಮುಂದಾಗಿದ್ದಾರೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಗಾಯಾಳುಗಳು 50 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ದು, ಸ್ಥಳೀಯರಿಗಾಗಿ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಿಸಿ ಕೊಡಲಿದ್ದಾರೆ.