ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟ್ ಬೋರ್ಡ್ ಮೇಲೆ ತೆರಳುತ್ತಿದ್ದ ಕೇರಳ ಮೂಲದ ಯುವಕ ಅಪಘಾತದಲ್ಲಿ ಬಲಿಯಾಗಿರುವ ದಾರುಣ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಮಂಗಳವಾರದಂದು ನಡೆದಿದೆ.
ಕೇರಳದ ಅನಾಸ್ ಅಜಾಸ್ ಮೃತ ವ್ಯಕ್ತಿಯಾಗಿದ್ದು, ಇವರು ಪಂಚಕುಲದ ಪಿಂಜೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಕೇಟ್ ಬೋರ್ಡ್ ಮೇಲೆ ಹೋಗುತ್ತಿದ್ದಾಗ ಅಪರಿಚಿತ ಟ್ರಕ್ ಒಂದು ಡಿಕ್ಕಿ ಹೊಡೆದಿದೆ. ಬಳಿಕ ಟ್ರಕ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸ್ಥಳೀಯರು ಅನಾಸ್ ರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಮೇ 29, 2022ರಂದು ಸ್ಕೇಟ್ ಬೋರ್ಡ್ ಮೇಲೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟಿದ್ದ ಕೇರಳದ ತಿರುವನಂತಪುರ ಮೂಲದ ಅನಾಸ್ ಒಟ್ಟು 3511 ಕಿಲೋಮೀಟರ್ ಕ್ರಮಿಸುವ ಗುರಿಯನ್ನು ಹೊಂದಿದ್ದರು. ಅವರು ಇನ್ನು ಕೇವಲ 600 ಕಿಲೋಮೀಟರ್ ಕ್ರಮಿಸಿದ್ದರೆ ಕಾಶ್ಮೀರ ತಲುಪುತ್ತಿದ್ದು ಅಷ್ಟರಲ್ಲಾಗಲೇ ಅಪಘಾತಕ್ಕೆ ಬಲಿಯಾಗಿದ್ದಾರೆ.
ಅನಾಸ್ ತಮ್ಮ ಪ್ರತಿದಿನದ ದಿನಚರಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ನಾನು ಈಗ ಪ್ರತಿನಿತ್ಯ 40 ರಿಂದ 50 ಕಿಲೋಮೀಟರ್ ಕ್ರಮಿಸುತ್ತಿದ್ದು, ಇನ್ನು 15 ದಿನಗಳಲ್ಲಿ ಕಾಶ್ಮೀರ ತಲುಪುವುದಾಗಿ ಅವರು ಬರೆದುಕೊಂಡಿದ್ದರು. ಆದರೆ ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ.