ಮಂಗಳವಾರದಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮೋತ್ಸವ’ ಕ್ಕೆ ಹರಿದು ಬಂದ ಜನಸಾಗರ ನೋಡಿ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ತುಂತುರು ಮಳೆಯಲ್ಲೂ ಹುಮ್ಮಸ್ಸು ಕಳೆದುಕೊಳ್ಳದೆ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ ಕಾರ್ಯಕ್ರಮ ಆಯೋಜಿಸಿದ್ದ ಸಿದ್ದರಾಮಯ್ಯ ಬೆಂಬಲಿಗರು ಸಹ ಇಷ್ಟೊಂದು ಪ್ರಮಾಣದಲ್ಲಿ ಜನ ಆಗಮಿಸುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಅವರ ನಿರೀಕ್ಷೆಗೂ ಮೀರಿ ಜನ ಸಮೂಹ ಆಗಮಿಸಿದ್ದು, ಕಾರ್ಯಕ್ರಮ ಆಯೋಜಿಸಿದ್ದಕ್ಕೂ ಸಾರ್ಥಕ ಎಂಬ ಭಾವ ಮೂಡಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಸಮಾವೇಶ ಹಲವು ಸಂದೇಶಗಳನ್ನು ನೀಡಿದ್ದು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ ಎಂಬುದನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಕಾಂಗ್ರೆಸ್ ನ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಮುಂಬರುವ ಚುನಾವಣೆಗಳನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂಬ ಸಂದೇಶವನ್ನು ವಿರೋಧ ಪಕ್ಷಗಳಿಗೆ ರವಾನಿಸಿದ್ದಾರೆ.