ಬೆಂಗಳೂರು: ರಾಜ್ಯ ಸರ್ಕಾರ 11 ಇಲಾಖೆಗಳ ನಿರ್ದಿಷ್ಟ ಹುದ್ದೆಗಳ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆರನೇ ವೇತನ ಆಯೋಗ ಸಲ್ಲಿಸಿದ ವರದಿಯಂತೆ ಅರಣ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ 11 ವಿವಿಧ ಇಲಾಖೆಗಳ ನಿರ್ದಿಷ್ಟ ವೃಂದದ ಹುದ್ದೆಗಳ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದೆ. ಆಗಸ್ಟ್ ತಿಂಗಳಿನಿಂದಲೇ ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.
ಅರಣ್ಯ ಇಲಾಖೆಯ ಅರಣ್ಯ ರಕ್ಷಕರು, ಉಪವಲಯ ಅರಣ್ಯಾಧಿಕಾರಿಗಳು, ಆನೆ ಕಾವಾಡಿಗರು, ಮಾವುತರ ಹುದ್ದೆಗಳು, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ಆಶ್ರಮ ಶಾಲಾ ಶಿಕ್ಷಕರು, ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ ಇಲಾಖೆಯ ಸಹಾಯಕ ಕ್ಯುರೇಟರ್ ಮತ್ತು ಸರ್ವೆಯರ್, ಆರ್ಕಿಯಾಲಾಜಿಕ್ ಸಹಾಯಕ ಶಾಸನ ತಜ್ಞರು, ಕ್ಯುರೇಟರ್, ಪ್ರಾಚ್ಯವಸ್ತು ಸಹಾಯಕ ನಿರ್ದೇಶಕರು, ಅಬಕಾರಿ ಇಲಾಖೆಯ ಅಬಕಾರಿ ಉಪ ಅಧೀಕ್ಷಕರು, ಪೊಲೀಸ್ ವಿಧಿ ವಿಜ್ಞಾನ ಪ್ರಯೋಗಾಲಯ ಇಲಾಖೆಯ ಜಮೆದಾರ್, ಪ್ರಯೋಗಾಲಯ ಸಹಾಯಕರು, ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳು ಇಲಾಖೆಯ ಸಹಾಯಕ ನಿರ್ದೇಶಕರು, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಹ ನಿರ್ದೇಶಕರ ಹುದ್ದೆಗಳ ವೇತನ ಶ್ರೇಣಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.