ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನಾನು ಒಟ್ಟಾಗಿದ್ದೇವೆ. ಆದರೂ ಕೂಡ ಕೆಲ ಮಾಧ್ಯಮಗಳು ಮತ್ತು ವಿಪಕ್ಷಗಳ ನಾಯಕರು ಗೊಂದಲ ಮೂಡಿಸುವ ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಇಂದು ಅಭಿಮಾನಿಗಳು ಏರ್ಪಡಿಸಿದ್ದ ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಆದರೆ ನಾವಿಬ್ಬರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತದ ವೇಳೆ ಭ್ರಷ್ಟಾಚಾರ ಹಾಗೂ ಕೋಮುವಾದ ವ್ಯಾಪಕವಾಗುತ್ತಿದೆ. ಸಾಮಾನ್ಯ ಜನತೆ ಜೀವನ ಮಾಡುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿಮ್ಮ ಸಹಕಾರ ಬೇಕಾಗಿದೆ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.