ಬಳಕೆದಾರರ ಡೇಟಾಗಳನ್ನು ಭಾರತದಿಂದ ಹೊರಕ್ಕೆ ವರ್ಗಾವಣೆ ಮಾಡ್ತಿದ್ದ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಚೀನಾ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಪಡಿಸಿದ ಈ ಮೊಬೈಲ್ ಅಪ್ಲಿಕೇಶನ್‌ಗಳು, ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಉಲ್ಲಂಘಿಸುತ್ತಿವೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಈ ಆ್ಯಪ್‌ಗಳು ನಾಗರಿಕರ ಪ್ರೊಫೈಲ್ ತಯಾರಿಸಲು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಿ ಅನಧಿಕೃತ ರೀತಿಯಲ್ಲಿ ವಿದೇಶಕ್ಕೆ ರವಾನಿಸುತ್ತಿರುವುದು ಬೆಳಕಿಗೆ ಬಂದಿದೆ.
ಲೋಕಸಭೆಯಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ 348 ಮೊಬೈಲ್ ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಮತ್ತು ಪ್ರೊಫೈಲಿಂಗ್‌ಗಾಗಿ ದೇಶದ ಹೊರಗಿನ ಸರ್ವರ್‌ಗಳಿಗೆ ಅನಧಿಕೃತ ರೀತಿಯಲ್ಲಿ ರವಾನಿಸುತ್ತಿವೆ ಅಂತಾ ಅವರು ತಿಳಿಸಿದ್ದಾರೆ. ಈ ಎಲ್ಲಾ ಆ್ಯಪ್‌ಗಳನ್ನು ಚೀನಾ ಅಭಿವೃದ್ಧಿಪಡಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಅಪ್ಲಿಕೇಶನ್‌ಗಳನ್ನು ಚೀನಾ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಪಡಿಸಿವೆ” ಎಂದರು.
ದಕ್ಷಿಣ ಕೊರಿಯಾದ ಗೇಮಿಂಗ್ ದೈತ್ಯ ಕ್ರಾಫ್ಟನ್‌ನ ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ಭಾರತ ಸರ್ಕಾರದ ಸೂಚನೆ ಮೇರೆಗೆ ಗೂಗಲ್, ತನ್ನ ಪ್ಲೇ ಸ್ಟೋರ್‌ನಿಂದ ಅಮಾನತುಗೊಳಿಸಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ 348 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ.
2020ರ ಸೆಪ್ಟೆಂಬರ್‌ನಲ್ಲಿ ಚೀನಾ ಸಂಯೋಜಿತ ಇತರ 117 ಅಪ್ಲಿಕೇಶನ್‌ಗಳೊಂದಿಗೆ Krafton’s PlayerUnknown’s Battlegrounds (PUBG) ಅನ್ನು ನಿಷೇಧಿಸಲಾಗಿತ್ತು. ವರ್ಷದ ಆರಂಭದಲ್ಲಿ ಫೆಬ್ರವರಿ 14 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ 53 ಇತರ ಚೀನಾ-ಸಂಯೋಜಿತ ಅಪ್ಲಿಕೇಶನ್‌ಗಳೊಂದಿಗೆ, ರಾಯಲ್ ಗೇಮ್ ಫ್ರೀ ಫೈರ್ ಅನ್ನು ಸಹ ಸರ್ಕಾರ ನಿಷೇಧಿಸಿತ್ತು.