ಪಾನಿಪುರಿ ಮಾರಾಟಗಾರನೊಬ್ಬ ರಸ್ತೆಯ ಮಧ್ಯದಲ್ಲಿ ಕುಳಿತು ಕೆಳಗೆ ಬಿದ್ದಿದ್ದ ಗೋಲ್ಗಪ್ಪಾಗಳನ್ನು ಹೆಕ್ಕುತ್ತಿರುವ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಕೆದಾರನ ವಿರುದ್ಧ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅಂಕಿತ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಸಹಾಯಕ ಮಾರಾಟಗಾರರೊಬ್ಬರು ರಸ್ತೆಯಲ್ಲಿ ಬಿದ್ದಿರುವ ಗೋಲ್ಗಪ್ಪಾಗಳನ್ನು ಹೆಕ್ಕುತ್ತಾ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಲವಾರು ಜನರು ಆತನನ್ನು ಹಾದುಹೋದರೂ ಯಾರೂ ಸಹಾಯ ಮಾಡಲಿಲ್ಲ. ಮಾರಾಟಗಾರನಿಗೆ ಸಹಾಯ ಮಾಡದ್ದಕ್ಕಾಗಿ ಅಂಕಿತ್ನನ್ನು ಟ್ರೋಲ್ ಮಾಡಿದ್ದಾರೆ.
ತಾನು ಕಾರು ಚಲಾಯಿಸುತ್ತಿದ್ದಾಗ ಈ ವ್ಯಕ್ತಿಯನ್ನು ನೋಡಿದೆ, ಅವರ ಗೋಲ್ಗಪ್ಪಾ ರಸ್ತೆಯಲ್ಲಿ ಬಿದ್ದಿತ್ತು. ತಾನು ಕಾರನ್ನು ನಿಲ್ಲಿಸಲು ಬಯಸಿದೆ. ಆದರೆ, ತನ್ನ ಹಿಂದೆ ಬಹಳಷ್ಟು ವಾಹನಗಳು ಹಾರ್ನ್ ಮಾಡಲು ಪ್ರಾರಂಭಿಸಿದವು. ಆದ್ದರಿಂದ ತಾನು ಮುಂದೆ ಹೋಗಬೇಕಾಯಿತು. ಹಣ ಸಂಪಾದಿಸಲು ಕಷ್ಟಪಡಬೇಕಾದಾಗ ಜೀವನವು ಕಠಿಣವಾಗಿರುತ್ತದೆ. ಹೀಗಾಗಿ ಇಂತಹ ಸವಾಲುಗಳನ್ನು ಎದುರಿಸುವುದು ಸಹಜ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ.
ಇನ್ನು ಅಂಕಿತ್ ಅವರು ವಿಡಿಯೋವನ್ನು ತಾನು ಏತಕ್ಕಾಗಿ ಚಿತ್ರೀಕರಿಸಿದೆ ಎಂಬುದನ್ನು ವಿವರಿಸಿದ್ದಾರೆ. ಇದು ಬದುಕಿನ ಹೋರಾಟವನ್ನು ತೋರಿಸುವ ಉದ್ದೇಶದಿಂದ ವಿಡಿಯೋ ಚಿತ್ರೀಕರಿಸಲಾಗಿದೆ. ಅಂತಹ ಸಣ್ಣ ಮಾರಾಟಗಾರರನ್ನು ಬೆಂಬಲಿಸಲು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಕಳೆದ ಎರಡು ವರ್ಷಗಳಿಂದ ಕಡಿಮೆ ವ್ಯಾಪಾರದ ಕಾರಣ ಅವರ ಪರಿಸ್ಥಿತಿ ಹೇಳತೀರದಾಗಿದೆ. ಈ ವಿಡಿಯೋ ನೋಡಿದ್ರೆ ಅವರ ಜೀವನ ಎಷ್ಟು ಕಷ್ಟಕರವಾಗಿದೆ ಎನ್ನುವುದು ತಿಳಿಯುತ್ತದೆ ಅಂತಾ ಬರೆದಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋವನ್ನು 6.5 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಆದರೆ, ಇದರಿಂದ ನೆಟ್ಟಿಗರು ಪ್ರಭಾವಿತರಾದಂತೆ ಕಂಡುಬಂದಿಲ್ಲ. ಮಾರಾಟಗಾರನಿಗೆ ಸಹಾಯ ಮಾಡದೆ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ಆತನನ್ನು ದೂಷಿಸಿದ್ದಾರೆ.