ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಐಎಎಸ್ ಅಧಿಕಾರಿ ಸುಪ್ರಿಯಾ ಅವರು ಆ ವಿಡಿಯೋ ಹಂಚಿಕೊಂಡಿದ್ದು, ಹಸಿದ ಆನೆಯೊಂದು ಹಲಸಿನ ಹಣ್ಣಿಗಾಗಿ ನಡೆಸುವ ಹೋರಾಟ ಎಂತವರನ್ನೂ ನಿಬ್ಬೆರಗಾಗಿಸುತ್ತದೆ.
ಕಾಡಿನ ಅಂಚಿನಲ್ಲಿರುವ ಹಳ್ಳಿಯೊಂದರಲ್ಲಿ ಮನೆಯ ಪಕ್ಕ ಬೆಳೆಸಿದ ಹಲಸಿನ ಮರದಲ್ಲಿ ಎತ್ತರದಲ್ಲಿ ಹಲಸಿನ ಹಣ್ಣಿನ ರಾಶಿ ಇದ್ದು, ಅತ್ತ ಸಾಗಿಬಂದ ಆನೆ ಆ ಹಣ್ಣಿನತ್ತ ಗಮನಹರಿಸಿ ಕೀಳಲು ಪ್ರಯತ್ನಿಸುತ್ತದೆ.
ಹಣ್ಣಿನ ಕೊನೆ ಎತ್ತರದಲ್ಲಿದ್ದ ಕಾರಣ ಆನೆಗೆ ಅಷ್ಟು ಸಲೀಸಾಗಿ ಸಿಗುವಂತಿರಲಿಲ್ಲ. ಆದರೆ ಹಣ್ಣನ್ನು ಅಷ್ಟು ಸುಲಭವಾಗಿ ಬಿಡಲು ಇಷ್ಟವಿಲ್ಲದ ಆ ಆನೆ ಎಗರಿ ಕೀಳಲು ಪ್ರಯತ್ನಿಸುತ್ತದೆ. ಕೊನೆಗೆ ಎರಡು ಕಾಲನ್ನು ಮರದ ಮೇಲಿಟ್ಟು ಜೀಕಿ ಸೊಂಡಿಲಿನಿಂದ ಹಣ್ಣನ್ನು ಕೆಳಗೆ ಬೀಳಿಸಿಯೇ ಬಿಡುತ್ತದೆ.
ಆನೆಯ ಸಾಹಸವನ್ನು ಕಣ್ಣುತುಂಬಿಕೊಂಡ ಆ ಮನೆಯ ಆಜುಬಾಜಿನಲ್ಲಿದ್ದವರ ಕೂಗಾಟ ವಿಡಿಯೋದಲ್ಲಿ ಕೇಳಿಸುತ್ತದೆ. ಆನೆ ಯಾವುದಕ್ಕೂ ಜಗ್ಗದೇ ಹಣ್ಣನ್ನು ಕಿತ್ತುಕೊಳ್ಳುವ ಸಾಹಸ ನೋಡುಗರಿಗೆ ಮಜಾ ಕೊಡುತ್ತದೆ. ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿ ಪ್ರತಿಕ್ರಿಯೆ ದಾಖಲಿಸಿದ್ದಾರೆ.