ಮನುಷ್ಯನ ದುರಾಸೆ ಎಲ್ಲೇ ಮೀರಿದಾದ ಎಂಥ ನೀಚ ಕೃತ್ಯ ಮಾಡುವುದಕ್ಕೂ ಹಿಂದೆಮುಂದೆ ನೋಡಲ್ಲ ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್. ತಮಿಳುನಾಡಿನ ರಾಮನಾಥಪುರಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇಟ್ಟಿದ್ದ ಸಾಕ್ಷ್ಯವನ್ನು, ಇಬ್ಬರು ಪೊಲೀಸ್ ಪೇದೆ ಹಣದಾಸೆಗೆ ಮಾರಾಟ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.
ಸುರೇಶ್ ಮತ್ತು ಕಲಾಕಣ್ಣನ್ ಇಬ್ಬರು ಪೊಲೀಸ್ ಪೇದೆಗಳು ತನಿಖೆಗಾಗಿ ಇಟ್ಟಿರುವ ಪೋನ್ ಮತ್ತು ಬೆಲೆಬಾಳುವ ವಸ್ತುಗಳನ್ನ ಮಾರಾಟ ಮಾಡಿದ್ದಾರೆ. ಈ ಹಿಂದೆಯೂ ಇವರಿಬ್ಬರೂ ಈ ರೀತಿ ಸಾಕ್ಷ್ಯಕ್ಕಾಗಿ ತೆಗೆದಿಟ್ಟ ವಸ್ತುಗಳನ್ನ ಮಾರಾಟ ಮಾಡಿರೊದಾಗಿ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಈಗ ಇವರಿಬ್ಬರನ್ನೂ ಸಸ್ಪೆಂಡ್ ಮಾಡಲಾಗಿದೆ.
ರಾಮನಾಥ್ಪುರಂ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಶೋಕ್ಕುಮಾರ್ ಎಂಬ ಪೊಲೀಸ್ ಅಧಿಕಾರಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಪ್ರಕರಣವನ್ನ ಸಿಬಿ-ಸಿಐಡಿ ಇಲಾಖೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಸಿಬಿ-ಸಿಐಡಿ ಪೊಲೀಸರು ಕೇನಿಕರೈ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡುವಂತೆ ಹೇಳಿದ್ದರು. ಆಗ ಪೊಲೀಸ್ ಠಾಣೆಯ ವಶದಲ್ಲಿದ್ದ ಅಶೋಕ್ ಕುಮಾರ್ ಮೊಬೈಲ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.
ನಾಪತ್ತೆಯಾದ ಫೋನ್ ಗುರುತಿಸಲು ಸೈಬರ್ ಕ್ರೈಂ ಪೊಲೀಸರ ಸಹಾಯ ಪಡೆದ ತನಿಖಾಧಿಕಾರಿಗಳ ಮನಸ್ಸಿನಲ್ಲಿ ಇದು ಅನುಮಾನ ಹುಟ್ಟುಹಾಕಿತು. ನಂತರ ಸೈಬರ್ ಕ್ರೈಂ ಪೊಲೀಸರು ಕದ್ದ ಮೊಬೈಲ್ನ್ನು ಪತ್ತೆ ಹಚ್ಚಿ ಅದನ್ನು ಬಳಸುತ್ತಿದ್ದ ವ್ಯಕ್ತಿಯನ್ನ ಪತ್ತೆ ಹಚ್ಚಿದರು. ಆತನನ್ನ ವಿಚಾರಣೆಗೆ ಒಳಪಡಿಸಿದಾಗ ಫೋನ್ನ ಹೊಸ ಮಾಲೀಕರು ರಾಮನಾಥಪುರದ ಸ್ಥಳೀಯ ಸೆಲ್ಫೋನ್ ಅಂಗಡಿಯಿಂದ ಮೊಬೈಲ್ ಫೋನ್ ಖರೀದಿಸಿರುವುದಾಗಿ ಹೇಳಿದರು. ತಕ್ಷಣ ಸಿಬಿಸಿಐಡಿ ಪೊಲೀಸರು ಮೊಬೈಲ್ ಫೋನ್ ಅಂಗಡಿಯವರನ್ನು ವಿಚಾರಣೆಗೆ ಒಳಪಡಿಸಿದ್ದು, ಕೆನಿಕರೈ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಮೊಬೈಲ್ ಫೋನ್ 2000ರೂಪಾಯಿಗೆ ಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಸಿಬಿಸಿಐಡಿ ಪೊಲೀಸರು ಡಿಎಸ್ಪಿ ರಾಜಾ ಇನ್ಸ್ಪೆಕ್ಟರ್ ಮಲೈಚಾಮಿ, ಠಾಣಾಧಿಕಾರಿ ಸುರೇಶ್ ಮತ್ತು ಕಾನ್ಸ್ಟೆಬಲ್ ಕಮಲಾಕಣ್ಣನ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಾಥಪುರಂ ತಂಗದುರೈ ಇಬ್ಬರೂ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲು ಆದೇಶಿಸಿದ್ದಾರೆ.