ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದರಿಂದ ಮನೆಯ ಯಜಮಾನ ಮಾತ್ರವಲ್ಲ ಮಕ್ಕಳು ಕೂಡ ತೊಂದರೆ ಅನುಭವಿಸ್ತಿದ್ದಾರೆ. 1ನೇ ತರಗತಿಯಲ್ಲಿ ಓದುತ್ತಿರುವ 6 ವರ್ಷದ ಪುಟ್ಟ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಸಂಕಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಕೃತಿ ದುಬೆ ಎಂಬ ಬಾಲಕಿ ಮೋದಿಗೆ ಪತ್ರ ಬರೆದಿದ್ದು, ಪೆನ್ಸಿಲ್ ಮತ್ತು ಎರೇಸರ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ದೂರಿದ್ದಾಳೆ. ಪೆನ್ಸಿಲ್ ಕೊಡಿಸುವಂತೆ ಕೇಳಿದ್ರೆ ಅಮ್ಮ ನನಗೆ ಹೊಡೆಯುತ್ತಾರೆ ಅಂತಾ ಪತ್ರದಲ್ಲಿ ಬರೆದಿದ್ದಾಳೆ.
ಹಿಂದಿಯಲ್ಲಿ ಈ ಪತ್ರವನ್ನು ಬರೆದಿದ್ದು ಅದರ ಸಾರಾಂಶ ಹೀಗಿದೆ, “ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜೀ ನೀವು ಅಪಾರ ಬೆಲೆ ಏರಿಕೆಗೆ ಕಾರಣವಾಗಿದ್ದೀರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ಕೂಡ ದುಬಾರಿಯಾಗಿದೆ ಮತ್ತು ಮ್ಯಾಗಿ ಬೆಲೆ ಕೂಡ ಹೆಚ್ಚಾಗಿದೆ. ಈಗ ಅಮ್ಮ ಪೆನ್ಸಿಲ್ ಕೇಳಿದ್ದಕ್ಕೆ ಹೊಡೆಯುತ್ತಾಳೆ. ನಾನು ಏನು ಮಾಡಲಿ? ಇತರ ಮಕ್ಕಳು ನನ್ನ ಪೆನ್ಸಿಲ್ ಅನ್ನು ಕದಿಯುತ್ತಾರೆʼʼ
ಈ ರೀತಿ ಪುಟ್ಟ ಬಾಲಕಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಮಗಳು ಪ್ರಧಾನಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಆಕೆಯ ತಂದೆ ವಿಶಾಲ್ ದುಬೆ, ಇದು ಕೃತಿಯ ʼಮನ್ ಕಿ ಬಾತ್ʼ ಅಂತಾ ಹೇಳಿದ್ದಾರೆ. ಈ ಮಧ್ಯೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೃತಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಜಾಲತಾಣಗಳ ಮೂಲಕ ಪತ್ರದ ವಿಚಾರ ತಿಳೀತು, ನಾನು ಆ ಮಗುವಿನ ಶಿಕ್ಷಣಕ್ಕೆ ಸಹಾಯ ಮಾಡುತ್ತೇನೆ ಎಂದಿದ್ದಾರೆ.