ಬೆಂಗಳೂರು: ಸಾವಿನಲ್ಲಿಯೂ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದ್ದು, ಪರಿಹಾರ ವಿಚಾರದಲ್ಲಿಯೂ ತಾರತಮ್ಯವೆಸಗುತ್ತಿರುವುದು ಸರಿಯಲ್ಲ ಎಂದು ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಸಮಜಾಯಿಷಿ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಭೇಟಿ ನೀಡಿ ಪರಿಹಾರ ವಿತರಿಸಿದ್ದ ಸಿಎಂ, ಸುಳ್ಯದ ಮೃತ ಮಸೂದ್ ಮನೆಗೆ ಭೇಟಿ ನೀಡಿಲ್ಲ. ಇದು ಸಿಎಂ ಬೊಮ್ಮಾಯಿ ಬೇಜವಾಬ್ದಾರಿ ನಡೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಮುಂದಿನ ದಿನಗಳಲ್ಲಿ ಫಾಜಿಲ್ ಹಾಗೂ ಮಸೂದ್ ಮನೆಗಳಿಗೂ ಭೇಟಿ ನೀಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮುಂದಿನ ದಿನಗಳಲ್ಲಿ ಫಾಜಿಲ್ ಮನೆ ಹಾಗೂ ಮಸೂದ್ ಮನೆಗೂ ಭೇಟಿ ಕೊಡುತ್ತೇನೆ. ಸರಣಿ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಲಾಗುವುದು. ಕೇರಳ ಗಡಿ ಭಾಗದಲ್ಲಿ ಟೈಟ್ ಸೆಕ್ಯೂರಿಟಿಗೆ ಸೂಚನೆ ನೀಡಲಾಗಿದೆ ಎಂದರು.