ನಗರ ಪ್ರದೇಶದಲ್ಲಿ ಚಲನಚಿತ್ರ ವೀಕ್ಷಣೆಯ ಒಂದು ಟಿಕೆಟ್ ದರ, ಒಂದು ಸಾಧಾರಣ ಊಟದ ದರ ಅಥವಾ ಸಣ್ಣ ಕುಟುಂಬದ ವಾರದ ದಿನಸಿ ಸಾಮಾನಿನ ಮೊತ್ತ 300 ರೂ. ಇರಬಹುದು. ಈ ಮೊತ್ತ ಭಾರತದಾದ್ಯಂತ ಸಾವಿರಾರು ಜನರ ತಿಂಗಳ ಪೂರ್ಣ ಪಿಂಚಣಿ ಮೊತ್ತವಾಗಿದೆ.
ವೃದ್ಧರಿಗೆ ನೀಡುವ ವೃದ್ಧಾಪ್ಯ ವೇತನ 300 ರೂ. ಇದ್ದು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಯಡಿ ಪಿಂಚಣಿ ತಿಂಗಳಿಗೆ 200 ರೂ.ನಿಂದ 300 ರೂ.ಗೆ ಏರಿದ್ದು 2012ರಲ್ಲಿ. ಅಲ್ಲಿಂದ ಇಲ್ಲಿವರೆಗೂ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಹತ್ತು ವರ್ಷಗಳ ನಂತರ ಮತ್ತೊಂದು ಪರಿಷ್ಕರಣೆಗೆ ದೊಡ್ಡ ಸಂಖ್ಯೆಯಲ್ಲಿ ವೃದ್ಧರು ಕಾಯುತ್ತಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ತನ್ನ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಏರುತ್ತಿರುವ ಬೆಲೆಗಳ ಸಂದರ್ಭದಲ್ಲಿ ಪಿಂಚಣಿ ಪರಿಷ್ಕರಣೆ ಆಗದಿರುವುದು ಹೆಚ್ಚಿನ ಫಲಾನುಭವಿಗಳಿಗೆ ಬೇಸರವಿದೆ.
ದೆಹಲಿಯ ಜಹಾಂಗೀರ್ಪುರಿ ಕಾಲೋನಿಯಲ್ಲಿ ವಾಸಿಸುವ ದೇವಿ ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡಿ, 10 ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು, ವಿಕಲಚೇತನರ ಪಿಂಚಣಿ ಯೋಜನೆಯಡಿ ಪ್ರತಿ ತಿಂಗಳು 300 ರೂ. ಸಿಗುತ್ತಿದೆ. ಈ ಹಣ ಸಾಲದೇ ಇರುವುದರಿಂದ 70 ವರ್ಷಕ್ಕಿಂತ ಮೇಲ್ಪಟ್ಟ ನನ್ನ ಪತಿ ಇತ್ತೀಚಿನ ಬೆಲೆ ಏರಿಕೆಯನ್ನು ತಡೆದುಕೊಳ್ಳಲಾಗದೇ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಯೋಜನೆಗಳ ನೋಡಲ್ ಸಚಿವಾಲಯದ ಅಡಿಯಲ್ಲಿ ಒದಗಿಸಲಾದ ಪಿಂಚಣಿ ಮೊತ್ತದಲ್ಲಿ ಬದಲಾವಣೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾಪವಿಲ್ಲ ಎಂದು ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಅವರು ಇತ್ತೀಚೆಗೆ ಸಲ್ಲಿಸಿದ ಆರ್ಟಿಐ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಗುರುತಿಸಲು ಹೇಳಲು ಇಚ್ಛಿಸದ 76 ವರ್ಷದ ಮಹಿಳೆಯೊಬ್ಬರು, 2015ರಲ್ಲಿ ತನ್ನ ಪತಿಯನ್ನು ಕ್ಯಾನ್ಸರ್ನಿಂದ ಕಳೆದುಕೊಂಡಿದ್ದೇನೆ ಮತ್ತು ಇಂದಿರಾ ಗಾಂಧಿ ವಿಧವಾ ಪಿಂಚಣಿ ಯೋಜನೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿಯಿಂದ ಪಡೆಯುವ ತಲಾ 300 ರೂ. ಮಾತ್ರ ಸಿಗುತ್ತಿದೆ. ತನ್ನ ನಿರುದ್ಯೋಗಿ ಮಗನೊಂದಿಗೆ ರಾಂಚಿಯಲ್ಲಿ ವಾಸಿಸುವ ಮಹಿಳೆ ಜಾರ್ಖಂಡ್ ಸರ್ಕಾರದಿಂದ ಸ್ವಲ್ಪ ಹಣವನ್ನು ಪಡೆಯುತ್ತಾಳೆ. ಆದರೆ ಒಟ್ಟು ಮೊತ್ತ ಮಾಸಿಕ 2,500 ರೂ. ಅಷ್ಟೇ ಇದು ಸಾಕಾಗುವುದಿಲ್ಲ ಎಂಬುದು ಆಕೆಯ ಅಭಿಪ್ರಾಯ.
ಭಾರತವು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುವುದಾದರೆ ಮುಂದುವರೆದಿ ದೇಶವಲ್ಲ. ಇಲ್ಲಿ ನೀಡುವ ಪಿಂಚಣಿಗಳು ಎಂದಿಗೂ ಸಾಕಾಗುವುದಿಲ್ಲ, ಹಲವಾರು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಮೊತ್ತವು ನೂರರ ಪ್ರಮಾಣದಲ್ಲಿದ್ದು ಅದು ಸಾವಿರಗಳಲ್ಲಿ ಬದಲಾಗಬೇಕಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ರಾಜ್ಯಗಳು ತಮ್ಮದೇ ಆದ ಯೋಜನೆಗಳನ್ನು ಹೊಂದಿವೆ. ದೆಹಲಿ ಮತ್ತು ಆಂಧ್ರಪ್ರದೇಶಗಳು ಅತಿ ಹೆಚ್ಚು ಪಿಂಚಣಿ ನೀಡುವ ರಾಜ್ಯಗಳು. ಕೇಂದ್ರವು ನೀಡುವ ಕೊಡುಗೆಯನ್ನು ಮಾತ್ರ ನೀಡುವ ರಾಜ್ಯಗಳಿವೆ. ಈ ಮೊತ್ತವು ತಿಂಗಳಿಗೆ ಕನಿಷ್ಠ 5,000 ರೂಪಾಯಿಗಳಾಗಿರಬೇಕು ಎಂದು ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಪ್ರಧಾನ ಕಾರ್ಯದರ್ಶಿ ಮುರಳೀಧರನ್ ಪಿಟಿಐಗೆ ತಿಳಿಸಿದ್ದಾರೆ. ಅಂದಾಜು 2.9 ಕೋಟಿ ಫಲಾನುಭವಿಗಳು ಎಲ್ಲಾ ಪಿಂಚಣಿ ಯೋಜನೆಗಳ ಅಡಿಯಲ್ಲಿ ಒಳಪಡುತ್ತಾರೆ.