ಕೂಚ್ ಬೆಹಾರ್(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವ್ಯಾನ್ ಗೆ ವಿದ್ಯುತ್ ಸ್ಪರ್ಶದಿಂದ 10 ಜನರು ಸಾವನ್ನಪ್ಪಿದ್ದಾರೆ ಎಂದು ಭಾನುವಾರ ತಡರಾತ್ರಿ ಪೊಲೀಸರು ತಿಳಿಸಿದ್ದಾರೆ.
ಜಲ್ಪೇಶ್ ಗೆ ವಾಹನ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನೆಯ ನಂತರ, ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವ್ಯಾನ್ ನಲ್ಲಿದ್ದ 27 ಜನರ ಪೈಕಿ 16 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಲ್ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾನ್‌ನಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‌ನ ವೈರಿಂಗ್‌ನಿಂದ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ಮೆಖ್ಲಿಗಂಜ್ ಪಿಎಸ್ ವ್ಯಾಪ್ತಿಯ ಧಾರ್ಲಾ ಸೇತುವೆಯಲ್ಲಿ ಜಲ್ಪೇಶ್‌ಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್‌ಅಪ್ ವ್ಯಾನ್‌ಗೆ ವಿದ್ಯುತ್ ಸ್ಪರ್ಶವಾಗಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಮತಭಾಂಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.
ಎಲ್ಲಾ ಪ್ರಯಾಣಿಕರು ಸಿತಾಲ್ಕುಚಿ ಪಿಎಸ್ ಪ್ರದೇಶಕ್ಕೆ ಸೇರಿದವರಾಗಿದ್ದು, ದುರಂತ ಘಟನೆಯ ಬಗ್ಗೆ ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ವಾಹನ ವಶಪಡಿಸಿಕೊಳ್ಳಲಾಗಿದೆ. ಚಾಲಕ ಪರಾರಿಯಾಗಿದ್ದಾನೆ ಎಂದರು.