ರತ್ಲಾಮ್(ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಂಬಂಧಪಟ್ಟ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಯೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಗುರುವಾರ ರತ್ಲಾಮ್ ನ ಮಮತ್ ಖೇಡ್ ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶನಿವಾರದಂದು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ವಿಡಿಯೋ ವೈರಲ್ ಆದ ನಂತರ ಶಿಕ್ಷಕ ಜೆ.ಕೆ. ಮೊಗರ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕೆ.ಸಿ. ಶರ್ಮಾ ತಿಳಿಸಿದ್ದಾರೆ.
ವಿಡಿಯೋ ಒಂದರಲ್ಲಿ ಶಿಕ್ಷಕ 3ನೇ ತರಗತಿಯ ವಿದ್ಯಾರ್ಥಿನಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಮತ್ತೊಬ್ಬ ವಿದ್ಯಾರ್ಥಿನಿ ಕರೆದು ಮಾಡಿ ಸಂಖ್ಯೆಗಳನ್ನು ಹೇಳುವಂತೆ ಹೇಳಿದ್ದಾನೆ. ಭಯಭೀತಳಾದ ವಿದ್ಯಾರ್ಥಿನಿ ಎಣಿಕೆ ವೇಳೆ ಎಡವುತ್ತಾಳೆ. ಆಗ ಆಕೆಯ ತಲೆಯ ಹಿಂಭಾಗಕ್ಕೆ ಬಾರಿಸುತ್ತಾನೆ. ಮುಖದ ಮೇಲೆ ಪದೇ ಪದೇ ಹೊಡೆಯುತ್ತಾನೆ. ಅವಳು ಕುಳಿತುಕೊಳ್ಳುವ ಸ್ಥಳಕ್ಕೆ ಹಿಂತಿರುಗಿದಾಗ ಹಿಂಬಾಲಿಸುತ್ತಾನೆ ತಲೆಗೆ ಹೊಡೆಯುತ್ತಾನೆ.
ಶಿಕ್ಷಕನ ಚಿತ್ರಹಿಂಸೆಯಿಂದಾಗಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆ ತಪ್ಪಿಸಿಕೊಳ್ಳುತ್ತಾರೆ ಎಂಬ ದೂರನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು ಸ್ವೀಕರಿಸಿದ್ದಾರೆ. ದೂರಿನ ನಂತರ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ವಿಚಾರಣೆಯನ್ನು ಪ್ರಾರಂಭಿಸಲಾಗಿದೆ.
ಶಿಕ್ಷಕ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗಾ ಥಳಿಸುತ್ತಾನೆ ಎಂಬ ಭಯದಿಂದ ಹಲವಾರು ಹುಡುಗಿಯರು ಶಾಲೆಗೆ ಹೋಗುವುದಿಲ್ಲ ಎಂದು ಹೇಳಲಾಗಿದೆ.