ಬೆಂಗಳೂರು: ಮಹಿಳೆಯರನ್ನು ಬೆತ್ತಲೆಗೊಳಿಸಿ ನಗ್ನ ವಿಡಿಯೋ ಮಾಡಿ ಹಣ ದೋಚುತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಿಕೃತಿ ಮೆರೆದು ಹಣ ದೋಚುತಿದ್ದ ಮಂಗಳಾ, ರವಿ, ಶಿವಕುಮಾರ್, ಶ್ರೀನಿವಾಸ ಅವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಂಪತಿಯಾಗಿರುವ ರವಿ ಮತ್ತು ಮಂಗಳಾ ವಿಚ್ಛೇದಿತರು ಮತ್ತು ಒಂಟಿಯಾಗಿರುವ ಮಹಿಳೆಯರನ್ನು ಗುರುತಿಸಿಕೊಂಡು ಗೆಳೆತನ ಬೆಳೆಸುತ್ತಿದ್ದರು. ಬಳಿಕ ಫೋನ್ ಮೂಲಕ ಮಾತನಾಡಿ ಮೀಟ್ ಮಾಡೋಣ ಬನ್ನಿ ಎಂದು ಕರೆಯುತ್ತಿದ್ದರು. ನಂತರ ಕಾರ್ ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಹಿಳೆಯರಿಗೆ ಬಟ್ಟೆ ಬಿಚ್ಚಲು ಹೇಳುತ್ತಿದ್ದರು. ಒಪ್ಪದಿದ್ದಾಗ ಹಲ್ಲೆ ಮಾಡಿ ಬಟ್ಟೆ ತೆಗೆಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಮಹಾಲಕ್ಷ್ಮಿ ಲೇಔಟ್ ನ ಮಹಿಳೆಯೊಬ್ಬರಿಂದ ಚಿನ್ನದ ಸರ, ಕಿವಿಯೋಲೆ, ಉಂಗುರ ಕಸಿದುಕೊಂಡು ಫೋನ್ ಪೇ ಮೂಲಕ 84,000 ರೂ., ವರ್ಗಾವಣೆ ಮಾಡಿಸಿಕೊಂಡಿದ್ದರು. ಬಳಿಕ ಎಟಿಎಂನಿಂದಲೂ 40,000 ರೂ. ಡ್ರಾ ಮಾಡಿಸಿಕೊಂಡಿದ್ದರು.
ನಂತರ ಮಹಿಳೆ ಸಿಮ್ ಕಾರ್ಡ್ ಕಸಿದುಕೊಂಡು ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದು, ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ರೀತಿ 8 ಮಹಿಳೆಯರಿಗೆ ಹಿಂಸೆ ನೀಡಿ ಹಣ ದೋಚಿರುವುದು ತನಿಖೆಯಲ್ಲಿ ಗೊತ್ತಾಗಿದೆ. ನೊಂದ ಮಹಿಳೆಯರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.