ಪಂಜಾಬ್ ಆರೋಗ್ಯ ಸಚಿವರು ಅಲ್ಲಿನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ವೇಳೆ ವಾರ್ಡ್ನಲ್ಲಿದ್ದ ಕೊಳಕು ಬೆಡ್ ಕಂಡು ಕೆಂಡಾಮಂಡಲರಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮೊಂದಿಗಿದ್ದ ವೈದ್ಯ ಹಾಗೂ ಆರೋಗ್ಯ ವಿವಿ ಉಪ ಕುಲಪತಿ ಅವರನ್ನು ಆ ಬೆಡ್ ಮೇಲೆ ಮಲಗುವಂತೆ ತಾಕೀತು ಮಾಡಿದ್ದಾರೆ.
ಇಂಥದೊಂದು ಘಟನೆ ಶುಕ್ರವಾರದಂದು ನಡೆದಿದ್ದು, ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್, ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಫರೀದ್ ಕೋಟ್ ನ ಗುರು ಗೋವಿಂದ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ವಿವಿ ಕುಲಪತಿಗಳೂ ಆದ ವೈದ್ಯ ಡಾ. ರಾಜ್ ಬಹದ್ದೂರ್ ಜೊತೆಯಲ್ಲಿದ್ದರು.
ಆಸ್ಪತ್ರೆಯ ವಾರ್ಡ್ ನಲ್ಲಿ ಕೊಳಕು ಬೆಡ್ ಇದ್ದದ್ದನ್ನು ಕಂಡ ಸಚಿವ ಚೇತನ್ ಸಿಂಗ್ ಕಿಡಿ ಕಿಡಿ ಆಗಿದ್ದಾರೆ. ಅಲ್ಲದೆ ವಿವಿ ಉಪಕುಲಪತಿ ಡಾ. ರಾಜ್ ಬಹದ್ದೂರ್ ಅವರಿಗೆ ಮಲಗುವಂತೆ ತಾಕೀತು ಮಾಡಿದ್ದಾರೆ. ಇದರಿಂದ ತೀವ್ರ ಅವಮಾನಕ್ಕೊಳಗಾದ ರಾಜ್ ಬಹದ್ದೂರ್ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ ಬಹದ್ದೂರ್ ಕೊಳಕು ಹಾಸಿಗೆ ಮೇಲೆ ಮಲಗುವ ವಿಡಿಯೋ ಹಾಗೂ ಬಳಿಕ ಕಣ್ಣೀರಿಡುತ್ತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ಅತಿರೇಕದ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.