ಪಾಣಿಪತ್: ತಂದೆ ವಿರುದ್ಧದ ಲೈಂಗಿಕ ಕಿರುಕುಳ ದೂರು ಹಿಂಪಡೆಯುವಂತೆ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ ಎಂದು 17 ವರ್ಷದ ಯುವತಿ ಹೇಳಿದ್ದಾಳೆ.
ನಾಲ್ಕು ದಿನಗಳ ಹಿಂದೆ ತನ್ನ ತಂದೆಯ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದ ಪಾಣಿಪತ್ ನ ಅಪ್ರಾಪ್ತೆ ದೂರನ್ನು ಹಿಂಪಡೆಯುವಂತೆ ಕುಟುಂಬಸ್ಥರಿಂದ ಒತ್ತಡ ಹೇರಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದಾಳೆ.
ಸಂತ್ರಸ್ತೆಯ ತಂದೆ ಹಲವಾರು ಸಂದರ್ಭಗಳಲ್ಲಿ ಅವಳಿಗೆ ನಿದ್ರೆ ಮಾತ್ರೆಗಳನ್ನು ನೀಡಿ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದು, ನಂತರ ಆಕೆ ದೂರು ದಾಖಲಿಸಿದ್ದಾಳೆ.
ಸಂತ್ರಸ್ತೆ ತನ್ನ ತಾಯಿ ಸೇರಿದಂತೆ ತನ್ನ ಕುಟುಂಬ ಸದಸ್ಯರಲ್ಲಿ ತಂದೆಯ ಕೃತ್ಯದ ಬಗ್ಗೆ ಹೇಳಿದ್ದರೂ ಅವರಿಂದ ಯಾವುದೇ ಬೆಂಬಲ ಸಿಗಲಿಲ್ಲ. ಆಕೆ ಜುಲೈ 22 ರಂದು ಪೊಲೀಸರಿಗೆ ದೂರು ಸಲ್ಲಿಸಿದ ಕೂಡಲೇ ಆರೋಪಿಯನ್ನು ಬಂಧಿಸಲಾಯಿತು.
ಪಾಣಿಪತ್ ಪೊಲೀಸ್ ಅಧೀಕ್ಷಕ ಶಶಾಂಕ್ ಕುಮಾರ್ ಸಾವನ್ ಮಾತನಾಡಿ, ನಾವು ಈಗಾಗಲೇ ತನಿಖೆ ಆರಂಭಿಸಿದ್ದೇವೆ. ಅಲ್ಲದೆ, ಈಗಾಗಲೇ ತಂಡವೊಂದು ಬಾಲಕಿಯೊಂದಿಗೆ ಸಂಪರ್ಕದಲ್ಲಿದೆ. ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಿಳಾ ಸಂರಕ್ಷಣಾ ಅಧಿಕಾರಿ ಕಮ್ ಬಾಲ್ಯವಿವಾಹ ನಿಷೇಧ ಅಧಿಕಾರಿ ರಜನಿ ಗುಪ್ತಾ ಅವರು, ನಾವು ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಹೇಳಿದ್ದಾರೆ.