ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವರಲ್ಲಿ ಮಂಕಿಪಾಕ್ಸ್ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವ್ಯಕ್ತಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ಬಂದಿದೆ ಆದರೆ ಮತ್ತೊಂದು ಸೋಂಕು ಇರುವುದು ದೃಢಪಟ್ಟಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದು, ಬೆಂಗಳೂರಿಗೆ ಬಂದಿದ್ದ ಇಥಿಯೋಪಿಯಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಅವರ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗಟೀವ್ ಎಂದು ಧೃಢಪಟ್ಟಿದೆ. ಆದರೆ ಅವರಿಗೆ ಚಿಕನ್ ಪಾಕ್ಸ್ ಇರುವುದು ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಮಂಕಿಪಾಕ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಸೋಂಕು ಕಂಡುಬಂದಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲೇ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ಧರಸ ಗ್ರಂಥಿಗಳ ಊತ ಮುಂತಾದ ಲಕ್ಷಣಗಳ ಪತ್ತೆಗಾಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.