ಸಂಗಾತಿಯ ಸ್ಪಷ್ಟ ಅನುಮತಿಯಿಲ್ಲದೆ ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ ತೆಗೆಯುವುದು ಅಪರಾಧ ಎಂದು ಕೆನಡಾದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 2017 ರಲ್ಲಿ ಆನ್‌ಲೈನ್‌ನಲ್ಲಿ ಸಂವಹನ ನಡೆಸಿದ ಇಬ್ಬರು, ಲೈಂಗಿಕ ಹೊಂದಾಣಿಕೆ ಇದೆಯೇ ಎಂಬುದನ್ನು ಪರೀಕ್ಷಿಸಲು ವೈಯಕ್ತಿಕವಾಗಿ ಭೇಟಿಯಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.
ಮಹಿಳೆ ಕಾಂಡೋಮ್ ಬಳಸಿ ಲೈಂಗಿಕ ಸಂಬಂಧ ಹೊಂದಲು ಸಮ್ಮತಿಸಿದ್ದಳು. ಇಬ್ಬರೂ ಎರಡು ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಒಂದು ಬಾರಿ ಆತ ಕಾಂಡೋಮ್ ಧರಿಸಿರಲಿಲ್ಲ. ಆತ ಕಾಂಡೋಮ್ ಧರಿಸಿಲ್ಲ ಅನ್ನೋ ವಿಚಾರವೇ ಆಕೆಗೆ ತಿಳಿದಿರಲಿಲ್ಲ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಆಕೆ HIVಯನ್ನು ತಡೆಗಟ್ಟಬಲ್ಲ ಚಿಕಿತ್ಸೆಯನ್ನು ಪಡೆಯಬೇಕಾಯ್ತು. ಹಾಗಾಗಿ ಆರೋಪಿ ರಾಸ್ ಮೆಕೆಂಜಿ ಕಿರ್ಕ್‌ಪ್ಯಾಟ್ರಿಕ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು.
ತಾನು ಕಾಂಡೋಮ್ ಧರಿಸಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದ ರಾಸ್ ಮೆಕೆಂಜಿ, ದೂರುದಾರ ಮಹಿಳೆ ಲೈಂಗಿಕ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು ಅಂತಾ ವಾದಿಸಿದ್ದ. ಇದನ್ನು ಒಪ್ಪಿಕೊಂಡಿದ್ದ ವಿಚಾರಣಾ ನ್ಯಾಯಾಲಯ, ಆರೋಪವನ್ನು ವಜಾಗೊಳಿಸಿತ್ತು. ಆದ್ರೆ ಈ ತೀರ್ಪನ್ನು ರದ್ದು ಮಾಡಿದ್ದ ಬ್ರಿಟಿಷ್ ಕೊಲಂಬಿಯಾ ಕೋರ್ಟ್ ಹೊಸ ವಿಚಾರಣೆಗೆ ಆದೇಶಿಸಿತ್ತು. ಕಳೆದ ನವೆಂಬರ್‌ನಲ್ಲಿ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್, ಈಗ ತೀರ್ಪು ಪ್ರಕಟಿಸಿದೆ.
“ಕಾಂಡೋಮ್ ಇಲ್ಲದೆ ಹೊಂದುವ ಲೈಂಗಿಕ ಸಂಭೋಗವು, ಕಾಂಡೋಮ್‌ನೊಂದಿಗಿನ ಲೈಂಗಿಕ ಸಂಭೋಗಕ್ಕಿಂತ ಮೂಲಭೂತವಾಗಿ ಮತ್ತು ಗುಣಾತ್ಮಕವಾಗಿ ವಿಭಿನ್ನ ದೈಹಿಕ ಕ್ರಿಯೆಯಾಗಿದೆ” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. “ಕಾಂಡೋಮ್ ಬಳಕೆ ಅಪ್ರಸ್ತುತ ಅಥವಾ ಪ್ರಾಸಂಗಿಕವಾಗಿರಬಾರದು ಎಂದು ನ್ಯಾಯಾಲಯ ಹೇಳಿದೆ. ದೇಶದಾದ್ಯಂತ ಪ್ರಮಾಣಿತವಾಗಿರುವ ಕ್ರಿಮಿನಲ್ ಕೋಡ್‌ನ ಹೊಸ ವ್ಯಾಖ್ಯಾನವು ಲೈಂಗಿಕ ಒಪ್ಪಿಗೆಯ ಸುತ್ತಲಿನ ನಿಯಮಗಳನ್ನು ತೀವ್ರವಾಗಿ ಬದಲಾಯಿಸುತ್ತದೆ ಎಂದು ಕಿರ್ಕ್‌ಪ್ಯಾಟ್ರಿಕ್ ಪರ ವಕೀಲರು ವಾದಿಸಿದ್ದಾರೆ.
ಇದು ಮುಂಗಡವಾಗಿ ಸಹಿ ಮಾಡಬಹುದಾದ ಬಂಧಕ ಒಪ್ಪಂದದಂತಿದೆ ಅಂತಾ ಹೇಳಿದ್ದಾರೆ. ಆಲ್ಬರ್ಟಾ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಮತ್ತು ಲಿಂಗ ಅಧ್ಯಯನಗಳ ಪ್ರಾಧ್ಯಾಪಕರಾದ ಲಿಸ್ ಗೊಟೆಲ್ ಮತ್ತು ಕೆನಡಾದ ಕಾನೂನು ಪರಿಣಿತರು ಸಹ ಈ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. “ಜಗತ್ತಿನ ಯಾವುದೇ ನ್ಯಾಯವ್ಯಾಪ್ತಿಯಲ್ಲಿ ಯಾರಾದರೂ ಲೈಂಗಿಕತೆಗೆ ಒಪ್ಪಿಗೆ ನೀಡಿದಾಗ ಅದು ಸ್ಪಷ್ಟವಾಗಿರಬೇಕು. ಕಾಂಡೋಮ್ ಅನ್ನು ಸಂಗಾತಿಯ ಒಪ್ಪಿಗೆಯಿಲ್ಲದೆ ತೆಗೆದುಹಾಕಿದ್ರೆ ಅದು ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎನಿಸಿಕೊಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದನ್ನು ಬಹಿರಂಗಪಡಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ, ಅದು ಮೋಸದಾಯಕವಾಗಿಯೂ ಆಗಿರಬಹುದು ಅಂತಾ ಹೇಳಿದ್ದಾರೆ. ಕಳೆದ ದಶಕದಲ್ಲಿ ಕಾಂಡೋಮ್ ಬಳಕೆಗೆ ಪ್ರತಿರೋಧವು ವ್ಯಾಪಕವಾಗಿದೆ. ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಗಮನಾರ್ಹ ಸಂಖ್ಯೆಯ ಮಹಿಳೆಯರೇ ಬಹಿರಂಗಪಡಿಸಿರುವ ಪ್ರಕಾರ, ಸೆಕ್ಸ್ ಸಂದರ್ಭದಲ್ಲಿ ಪಾಲುದಾರರು ಒಪ್ಪಿಗೆಯಿಲ್ಲದೇ ಕಾಂಡೋಮ್‌ಗಳನ್ನು ತೆಗೆದುಹಾಕುತ್ತಿದ್ದಾರೆ.
“ಕಳ್ಳತನ” ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಭ್ಯಾಸವು ಸಾಕಷ್ಟು ಪ್ರಚಲಿತವಾಗಿದೆ. ಕೆಲವು ಕೆನಡಾದ ವಿಶ್ವವಿದ್ಯಾನಿಲಯಗಳು ಅದನ್ನು ತಮ್ಮ ಲೈಂಗಿಕ ದೌರ್ಜನ್ಯ ತಡೆ ನೀತಿಗಳಲ್ಲಿ ಅಳವಡಿಸಿಕೊಂಡಿವೆ. ಬ್ರಿಟನ್ ಮತ್ತು ಸ್ವಿಟ್ಜರ್ಲೆಂಡ್‌ನ ನ್ಯಾಯಾಲಯಗಳು ಲೈಂಗಿಕ ಸಂಭೋಗದ ಸಮಯದಲ್ಲಿ ಕಾಂಡೋಮ್‌ಗಳನ್ನು ತೆಗೆದಿದ್ದಕ್ಕಾಗಿ ಅವರನ್ನು ದೋಷಿಯೆಂದು ಪರಿಗಣಿಸಿವೆ.