ಶಿವಸೇನೆ ನಾಯಕ ಸಂಜಯ್ ರಾವತ್ ನಿವಾಸದ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಪಾತ್ರಾ ಚಾಲ್ ಭೂ ಹಗರಣದ ಹಿನ್ನಲೆಯಲ್ಲಿ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ಮಹಾರಾಷ್ಟ್ರ ಹಾಗೂ ಶಿವಸೇನೆ ನಿರಂತರವಾಗಿ ಹೋರಾಡುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಸುಳ್ಳು ಆರೋಪ, ಸುಳ್ಳು ಸಾಕ್ಷ್ಯ ಎಂದು ಆರೋಪಿಸಿರುವ ಅವರು ಶಿವಸೇನೆ ತೊರೆಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಶಾಸಕರು ಬಂಡಾಯವೆದ್ದ ಸಂದರ್ಭದಲ್ಲಿ ಸಂಜಯ್ ರಾವತ್, ಮುಖ್ಯಮಂತ್ರಿಯಾಗಿದ್ದ ಉದ್ದವ್ ಠಾಕ್ರೆ ಅವರ ಬೆಂಬಲಕ್ಕೆ ಬಲವಾಗಿ ನಿಂತಿದ್ದರು. ಅಲ್ಲದೇ ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯ ಬಳಸಿಕೊಂಡು ನನ್ನನ್ನು ಹಣಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.