ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಇಂದೋರಿನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ರಾಗಿಂಗ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ರತ್ಲಮ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಮತ್ತೊಂದು ರಾಗಿಂಗ್ ಘಟನೆ ವಿಡಿಯೋ ಬಹಿರಂಗವಾಗಿದೆ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವಂತೆ ಆರು ಮಂದಿ ಕಿರಿಯ ವಿದ್ಯಾರ್ಥಿಗಳು ತಲೆತಗ್ಗಿಸಿಕೊಂಡು ಸಾಲಿನಲ್ಲಿ ನಿಂತಿದ್ದರೆ ಹಿರಿಯ ವಿದ್ಯಾರ್ಥಿಗಳು ಅವರುಗಳ ಕೆನ್ನೆಗೆ ಹೊಡೆಯುತ್ತಾರೆ ಅಲ್ಲದೆ ಅಶ್ಲೀಲವಾಗಿ ನಿಂದಿಸುತ್ತಾರೆ.
ಈ ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಎಂಟು ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಮೂರರಿಂದ ಆರು ತಿಂಗಳ ಕಾಲ ಅಮಾನತುಗೊಳಿಸಿದೆ. ಅಲ್ಲದೆ, ಕಾಲೇಜ್ ಹಾಸ್ಟೆಲ್ನಿಂದಲೂ ಹೊರಹಾಕಲಾಗಿದೆ.
ಕೆಲ ಮೂಲಗಳ ಹೇಳಿಕೆಯಂತೆ ಘಟನೆ ನಡೆದ ದಿನವೇ ಹಾಸ್ಟೆಲ್ ವಾರ್ಡನ್ ಅವರಿಗೆ ವಿಷಯ ತಿಳಿದಿದ್ದು, ಅವರು ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದರಲ್ಲದೆ, ಮದ್ಯದ ಬಾಟಲಿಗಳನ್ನು ಬಿಸಾಡಿದ್ದರು ಎನ್ನಲಾಗಿದೆ. ಇದೀಗ ಪೊಲೀಸರಿಗೂ ಸಹ ಹಿರಿಯ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.