ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೆಲವೊಂದು ಮಹತ್ವದ ನಿರ್ಧಾರಗಳನ್ನು ರಾತ್ರೋರಾತ್ರಿ ಕೈಗೊಳ್ಳುತ್ತದೆ ಮತ್ತು ಅಷ್ಟೇ ವೇಗವಾಗಿ ಬದಲಾಯಿಸುತ್ತದೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿ ಬರುತ್ತಿರುತ್ತದೆ.
ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೋ, ಫೋಟೋಗ್ರಫಿ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದ್ದು, ಆದರೆ ಸಾರ್ವಜನಿಕರ ವಿರೋಧಕ್ಕೆ ಮಣಿದು ಅದನ್ನು ರಾತ್ರೋರಾತ್ರಿ ಹಿಂಪಡೆಯಲಾಗಿತ್ತು.
ಹಾಗೆಯೇ ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ‘ಜನೋತ್ಸವ’ ಸಮಾವೇಶವನ್ನು ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಹಿನ್ನೆಲೆಯಲ್ಲಿ ರದ್ದುಗೊಳಿಸಲು ಮಧ್ಯರಾತ್ರಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಇದೀಗ ಮತ್ತೊಂದು ಅಂತಹುದೇ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿಗಳನ್ನು ಅದಲು – ಬದಲು ಮಾಡಿ ಶುಕ್ರವಾರ ಹೊರಡಿಸಿದ್ದ ಆದೇಶವನ್ನು ಒಂದೇ ದಿನದಲ್ಲಿ ಹಿಂಪಡೆಯಲಾಗಿದೆ.
ಮೊದಲಿನ ಆದೇಶದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿಯನ್ನು ಸಚಿವ ಆನಂದ್ ಸಿಂಗ್ ಅವರಿಗೆ ವಹಿಸಿದ್ದರೆ, ಶಶಿಕಲಾ ಜೊಲ್ಲೆ ಅವರಿಗೆ ಕೊಪ್ಪಳದ ಜವಾಬ್ದಾರಿ ನೀಡಲಾಗಿತ್ತು. ಆದರೆ ವಿರೋಧಕ್ಕೆ ಮಣಿದು ಮರುದಿನವೇ ಈ ಆದೇಶವನ್ನು ರದ್ದು ಪಡಿಸಲಾಗಿದೆ.