ಬೆಂಗಳೂರು: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ಕಾಮಾಕ್ಷಿಪಾಳ್ಯ ಠಾಣೆ ಪಿಎಸ್ಐ ಶರೀಫ್ ಕಲಿಮಠ್ ಅವರನ್ನು ಬಂಧಿಸಿದ್ದಾರೆ.
ಹಗರಣ ಹೊರಗೆ ಬರುತ್ತಿದ್ದಂತೆ ಪಿಎಸ್ಐ ಶರೀಫ್ ತಲೆಮರೆಸಿಕೊಂಡಿದ್ದರು. ಅವರು ಮುಂಬೈನಲ್ಲಿ ಅಡಗಿಕೊಂಡಿದ್ದು, ಸಿಐಡಿ ತಂಡ ಅವರನ್ನು ಬಂಧಿಸಿ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹೆಚ್ಚಿನ ವಿಚಾರಣೆಗಾಗಿ ಶರೀಫ್ ನನ್ನು 10 ದಿನ ಸಿಐಡಿ ಕಷ್ಟಡಿಗೆ ನೀಡಲಾಗಿದೆ.
ಆಗಸ್ಟ್ 8 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಪ್ರಥಮ ದರ್ಜೆ ಸಹಾಯಕ ಹರ್ಷ ಮತ್ತು ಇತರೆ ಅಭ್ಯರ್ಥಿಗಳೊಂದಿಗೆ ಶರೀಫ್ ಸಂಪರ್ಕದಲ್ಲಿದ್ದರು. 10 ಅಭ್ಯರ್ಥಿಗಳ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿ ಶರೀಫ್ ಕಾರ್ಯನಿರ್ವಹಿಸಿದ್ದರು. ಏಜೆಂಟ್ ಆಗಿ ಹಣ ಪಡೆದುಕೊಂಡು ಎಸ್‌ಡಿಎ ಹರ್ಷ ಅವರಿಗೆ ವರ್ಗಾವಣೆ ಮಾಡಿದ್ದರು. ಅವರನ್ನು ವಶಕ್ಕೆ ಪಡೆದ ಸಿಐಡಿ ವಿಚಾರಣೆ ನಡೆಸಿದೆ.