ದಾವಣಗೆರೆ: ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆಗೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಸಿದ್ದೇಶ್ವರ್ ಅವರು ಕೂಡಲೇ ಕಾರ್ಯಕರ್ತರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ಇರುವುದರಿಂದಲೇ ಸಿದ್ದೇಶ್ವರ ಸಂಸದರಾಗಿದ್ದಾರೆ. ಸಂಸದ ಸಿದ್ದೇಶ್ವರ ಅವರು ಕಾರ್ಯಕರ್ತರನ್ನು ಕೇವಲವಾಗಿ ಕಾಣಬಾರದು. ಪ್ರವೀಣ್ ಹತ್ಯೆ ಯುವ ಮೋರ್ಚಾ ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು ಎಂದು ಹೇಳಲಾಗಿದೆ.
ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕರ್ತ ಸಿದ್ದರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಬೃಹತ್ ಪಕ್ಷವಾಗಿದೆ. ಕೆಲವರು ರಾಜೀನಾಮೆ ಕೊಟ್ಟರೆ ಪಕ್ಷವೇನು ಮುಳುಗಿ ಹೋಗುವುದಿಲ್ಲ ಎಂದು ಸಂಸದ ಸಿದ್ದೇಶ್ವರ ಹೇಳಿಕೆ ನೀಡಿದ್ದರು. ಇದಕ್ಕೆ ಪಕ್ಷದ ಕಾರ್ಯಕರ್ತಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.