ಇದೊಂದು ಅತ್ಯಂತ ಕುತೂಹಲಕಾರಿ ಘಟನೆ. ಸುಮಾರು ಮೂವತ್ತು ವರ್ಷದ ಹಿಂದೆ ಮೃತರಾದ ವಧು- ವರರ ವಿವಾಹ ನಡೆದಿದೆ. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದರೆ, ವಿವಾಹ ನಡೆದಿದೆ, ಬಂಧು ಬಾಂಧವರ ಸಮ್ಮುಖದಲ್ಲಿ ವಿವಾಹ ನಡೆದಿದೆ.
ಇದು ಯಾವುದೇ ರೀತಿಯ ಹಾಸ್ಯದ ವಿಷಯವೂ ಅಲ್ಲ. ಕರ್ನಾಟಕದ ದಕ್ಷಿಣ ಕನ್ನಡ ಸಂಪ್ರದಾಯದ ಭಾಗವಾಗಿ ನಡೆದ ಘಟನೆ. ಅನ್ನಿ ಅರುಣ್ ಟ್ವಿಟ್ಟರ್ ಥ್ರೆಡ್ ಅನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರುಣ್ ಅವರು ಜುಲೈ 28 ರಂದು ಈ ಮದುವೆಗೆ ಹಾಜರಾಗಿದ್ದರು ಎಂದು ಹೇಳುವ ಮೂಲಕ ಅಲ್ಲಿ ನಡೆದ ಪ್ರಸಂಗವನ್ನು ಒಂದೊಂದಾಗಿ ಹೇಳಿಕೊಂಡು ಹೋಗಿದ್ದಾರೆ. ವಧು-ವರರಿಬ್ಬರೂ ಸುಮಾರು 30 ವರ್ಷಗಳ ಹಿಂದೆ ತೀರಿಹೋದರು, ಆದರೂ ಅವರ ಕುಟುಂಬದವರು ಅವರಿಗೆ ಮದುವೆ ಮಾಡಲು ನಿರ್ಧರಿಸಿದರು.
ಇದು ಸೀರಿಯಸ್ ವಿಚಾರ. ಅಲ್ಲಿ ಮೃತ ವಧು ಮತ್ತು ವರರ ಕುಟುಂಬಗಳು ಭಾಗವಹಿಸುತ್ತಾರೆ ಮತ್ತು ಈ ಕೂಟದಲ್ಲಿ ಸಾಕ್ಷಿಯಾಗಲು ಯಾವುದೇ ಮಕ್ಕಳಿಗೆ ಅನುಮತಿ ಇಲ್ಲ. ಹೆರಿಗೆಯಲ್ಲಿ ಸತ್ತುಹೋದ ಮಗುವಿಗೆ, ಹೆರಿಗೆಯ ಸಮಯದಲ್ಲಿ ಸತ್ತ ಮತ್ತೊಂದು ಮಗುವಿನೊಂದಿಗೆ ವಿವಾಹ ಮಾಡುತ್ತಾರೆ. ಎಲ್ಲಾ ಸಂಪ್ರದಾಯಗಳು ಸಾಮಾನ್ಯ ಮದುವೆಯಲ್ಲಿ ನಡೆದಂತೆಯೇ ನಡೆಯುತ್ತದೆ. ವಿವಾಹ ಪೂರ್ವದಲ್ಲಿ ನಿಶ್ಚಿತಾರ್ಥಕ್ಕಾಗಿ ಎರಡು ಕುಟುಂಬಗಳು ಪರಸ್ಪರರ ಮನೆಗೆ ಹೋಗುತ್ತವೆಯಂತೆ.
ಸಂಭ್ರಮಾಚರಣೆಗೇನು ಕಡಿಮೆಯಿಲ್ಲ. ಮದುವೆ ದಿಬ್ಬಣದ ಮೆರವಣಿಗೆ ಮತ್ತು ಅಂತಿಮವಾಗಿ ಗಂಟು ಕಟ್ಟುವುದು ಸಹ ಇರುತ್ತದೆ. ಅರುಣ್ ಅವರು ಧಾರೆ ಸೀರೆ ಹಸ್ತಾಂತರ, ಸಪ್ತಪದಿ ತುಳಿಯುವುದು, ಭೋಜನ ಎಲ್ಲ ಪ್ರಮುಖ ವಿಧಾನಗಳ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.