ಶ್ರಾವಣ ಮಾಸ ಆರಂಭವಾಗಿದ್ದು ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರಲಿವೆ ಗೌರಿ – ಗಣೇಶ, ದಸರಾ, ದೀಪಾವಳಿ ಮೊದಲಾದ ಪ್ರಮುಖ ಹಬ್ಬಗಳು ಮುಂದಿನ ದಿನಗಳಲ್ಲಿದ್ದು, ಉದ್ಯಮ ಮಾರುಕಟ್ಟೆ ಹೊಸ ಚೇತರಿಕೆ ಪಡೆಯಲಿದೆ. ಈಗಾಗಲೇ ಕೊರೊನಾ ಸಾಂಕ್ರಾಮಿಕ ಕಡಿಮೆಯಾಗಿದ್ದು, ಹಬ್ಬದಾಚರಣೆಗೆ ಜನ ಸಿದ್ಧತೆ ನಡೆಸುತ್ತಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಆನ್ಲೈನ್ ಖರೀದಿ ವಹಿವಾಟಿನಲ್ಲಿ ಭಾರಿ ಹೆಚ್ಚಳವಾಗಲಿದ್ದು, ಈ ಹಿನ್ನಲೆಯಲ್ಲಿ ಇ ಕಾಮರ್ಸ್ ಸಂಸ್ಥೆಗಳು ತಾತ್ಕಾಲಿಕ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿವೆ. ಮೂಲಗಳ ಪ್ರಕಾರ ಈ ಸಂದರ್ಭದಲ್ಲಿ 5 ಲಕ್ಷಕ್ಕೂ ಅಧಿಕ ತಾತ್ಕಾಲಿಕ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಹೇಳಲಾಗಿದೆ.
ಅಲ್ಲದೆ ವಾಹನ ಖರೀದಿಯಲ್ಲೂ ಹೆಚ್ಚಳವಾಗಲಿದ್ದು, ಬಹುತೇಕ ಉದ್ಯಮದ ಎಲ್ಲಾ ರಂಗಗಳು ಕಳೆ ಪಡೆದುಕೊಳ್ಳಲಿವೆ. ಕೋವಿಡ್ ನಂತರದ ಆರ್ಥಿಕ ಸಂಕಷ್ಟದಿಂದ ಬಹುತೇಕರು ಹೊರಬಂದಿದ್ದು ಖರೀದಿ ಭರಾಟೆ ಜೋರಾಗಲಿದೆ. ಹೀಗಾಗಿ ಇ ಕಾಮರ್ಸ್ ಸಂಸ್ಥೆಗಳು ಮಾತ್ರವಲ್ಲದೆ ಇತರೆ ಕ್ಷೇತ್ರಗಳಲ್ಲೂ ಸಹ ಉದ್ಯೋಗಿಗಳ ನೇಮಕಾತಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.